ನನ್ನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ತಕ್ಷಣ ನನ್ನ ತಂದೆಯವರು “ನೀನು ಯಾವ ಕಾಲೇಜಿಗೆ ಹೋಗುತ್ತಿಯಾ?’ ಎಂದು ಕೇಳದೆ “ನೀನು ಗೋವಿಂದದಾಸ ಕಾಲೇಜಿಗೆ ಹೋಗು’ ಎಂದು ಆದೇಶಿಸಿದ್ದರು. ನಾನು ಯಾವ ಕಾಲೇಜು ಹೋಗುವುದು ಎಂದಾಗ ಮೊದಲಿಗೆ ನೆನಪಾದದ್ದೇ ಈ ಕಾಲೇಜು.
ಅಪ್ಪ ಸೂಚಿಸಿದ್ದೂ ಅದೇ ಕಾಲೇಜು. ಹತ್ತಿರವಿರುವ ಕಾಲೇಜಿಗೇ ಹೋಗುವುದು ಒಳ್ಳೆಯದೆಂದೆನಿಸಿ ಒಪ್ಪಿಕೊಂಡೆ. ಮೇ ತಿಂಗಳಲ್ಲಿ ಪ್ರವೇಶಾತಿ ಸಹ ಆಯಿತು. ಜೂನ್ 9ರಂದು ಕಾಲೇಜಿಗೆ ಬರಲು ಹೇಳಿದ್ದರು. ಅಂದು ಕಾಲೇಜಿಗೆ ಹೋದೆ. ಗೆಳತಿ ಶಿವರಂಜನಿಗೆ ಹಿಂದಿನ ದಿನವೇ ಫೋನ್ ಮಾಡಿ, ನನಗಾಗಿ ಕಾಯುವಂತೆ ತಿಳಿಸಿದ್ದೆ. ಆಕೆ ಅದನ್ನು ಚಾಚೂತಪ್ಪದೆ ಪಾಲಿಸಿದ್ದಳು. ನನಗೋಸ್ಕರ ಕಾಲೇಜಿನ ಗೇಟಿನ ಹತ್ತಿರ ಆಕೆ ಕಾಯುತ್ತಿದ್ದದ್ದನ್ನು ನೋಡಿ ನಿಧಾನವಾಗಿದ್ದ ನನ್ನ ಕಾಲುಗಳ ವೇಗ ಹೆಚ್ಚಾಯಿತು. ಆನಂತರ ನಾವಿಬ್ಬರೂ ಕಾಲೇಜಿನ ಒಳಬಂದೆವು. ಅಲ್ಲಿ ನಮಗೆ ಕಾಲೇಜಿನ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸಿದ ಬಳಿಕ ನಾವು ಯಾವ ಸೆಕ್ಷನ್ ಸೇರಬೇಕೆಂದೂ ಹೇಳಿ ನಮ್ಮನ್ನು ಹೊರಬಿಟ್ಟರು.
ಮರುದಿನ ಎಲ್ಲರೂ ಸಮವಸ್ತ್ರ ಧರಿಸಿ ಬಂದಿದ್ದರು. ಗೆಳತಿ ಚಿರಶ್ರೀಯ ದರ್ಶನವೂ ಆಯಿತು. ಕ್ಲಾಸ್‌ಗೆ ಹೋಗಿ ನಾನು ಎಲ್ಲಿ ಕೂರಲಿ ಎಂದು ಅವಳಲ್ಲಿ ಕೇಳಿದಾಗ, “ಎಲ್ಲಿ ಬೇಕೋ ಅಲ್ಲಿ ಕೂರು’ ಎಂದು ಆಕೆಯ ಉತ್ತರ. ನಾನು ಅವಳ ಪಕ್ಕದಲ್ಲೇ ನನ್ನ ಬ್ಯಾಗ್ ಇಳಿಸಿ ಕುಳಿತೆ. ಎದುರಿನ ಬೆಂಚ್‌ನಲ್ಲಿ ಗೆಳತಿ ವಿಶಾಲಾಳೂ ಇದ್ದಳು. ಅವಳಲ್ಲಿ ಮಾತನಾಡಬೇಕು ಎಂದು ಕ್ಲಾಸ್‌ನಿಂದ ಹೊರಬಂದೆವು. ಅಷ್ಟರಲ್ಲಿ ಗಂಟೆಯ ಶಬ್ದ ಕಿವಿಗೆ ಬಿತ್ತು. ಎಲ್ಲರೂ ನಮ್ಮ ನಮ್ಮ ಜಾಗವನ್ನು ಅಲಂಕರಿಸಿದೆವು.
ಮೊದಲ ದಿನ ನಗುಮುಖ ಇಟ್ಟುಕೊಂಡು ಬಂದದ್ದು ಸದಾ ನಗುಮುಖದ ಗಾಯತ್ರಿ ಮೇಡಂ. ಅಂದಿನ ಕ್ಲಾಸ್‌ಗಳೆಲ್ಲ ಮುಗಿದು ಸಂತೋಷದಿಂದಲೇ ಮನೆ ಸೇರಿದೆ. ಕೆಲವು ದಿನಗಳ ಬಳಿಕ ನಮ್ಮ ಕಾಲೇಜಿನಲ್ಲಿ ಮತದಾನ ನಡೆಯಿತು. ಇಲೆಕ್ಷನ್‌ಗೆ ಆಕಾಶ್ ಮತ್ತು ಅನ್ವಿತಾ ನಿಂತಿದ್ದರು. ಇವರಿಬ್ಬರೂ “ವೋಟ್ ಫಾರ್ ಅನ್ವಿತಾ, ವೋಟ್ ಫಾರ್ ಆಕಾಶ್’ ಎಂದು ಗುಂಪು ಮಾಡಿಕೊಂಡು ಕಾಲೇಜಿನ ಕ್ಯಾಂಪಸ್‌ನಲ್ಲಿ ಓಡಾಡುತ್ತಾ ಮತಕ್ಕಾಗಿ ಯಾಚಿಸುತ್ತಿದ್ದರು. ಕಡೆಗೂ ಮತದಾನ ಮುಗಿಯಿತು.
ಮತ್ತೆ ನಮ್ಮ ದಿನನಿತ್ಯದ ಚಟುವಟಿಕೆಗಳು ಎಂದಿನಂತೆ ಶುರುವಾದವು. ನನ್ನ ಸ್ನೇಹಿತರ ಬಳಗವೂ ದಿನೇದಿನೇ ಹೆಚ್ಚಾಗುತ್ತಾ ಹೋಯಿತು. ನಿಧಿ, ಜೀವಿತಾ, ರಚನಾ ಎಲ್ಲರೂ ನನಗೆ ತುಂಬಾ ಹತ್ತಿರವಾದರು. ನಾವು ಯಾವುದೇ ಸ್ಪರ್ಧೆಯಿದ್ದರೂ ಒಟ್ಟಿಗೆ ಭಾಗವಹಿಸುತ್ತಿದ್ದೆವು. ಎಲ್ಲರೂ ಸೇರಿ ತಮಾಷೆ ಮಾಡುತ್ತಿದ್ದೆವು. ಅವರೊಂದಿಗೆ ಕಳೆದ ಒಂದೊಂದು ಕ್ಷಣಗಳೂ ಅತಿ ಮಧುರ! ಹೀಗೆ ಒಂದು ವರ್ಷ ಹೇಗೆ ಕಳೆಯಿತು ಎಂದೇ ತಿಳಿಯಲಿಲ್ಲ. ವಾರ್ಷಿಕ ಪರೀಕ್ಷೆಯೂ ಆಯಿತು. ಇನ್ನು ಮುಂದೆ ನಾವೇ ಸೀನಿಯರ್ ! ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆಲ್ಲ ಬೈ ಬೈ ಹೇಳಿ ಅವರ ಸ್ಥಾನ ತುಂಬಿದ್ದೆವು. ಈ ಒಂದು ವರ್ಷದ ಸುಂದರ ಪಯಣ ಮರೆಯಲಾಗದ ಒಂದು ಸುಮಧುರ ನೆನಪು.
– ಅಪೇಕ್ಷಾ ಶೆಟ್ಟಿ
ದ್ವಿತೀಯ ಪಿಯುಸಿ
ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್