ಸ್ನೇಹಿತ, “ಗಿರೀ … ಗಿರೀ’ ಎಂದು ಕೂಗಿಕೊಂಡ. ಅದು ನನಗೆ ಕೇಳಿಸಿತಾದರೂ, ಅವರು ನನ್ನ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು, ಅದನ್ನು ನಿರ್ಲಕ್ಷಿಸಿ ಬರೆಯುವುದರಲ್ಲಿ ತಲ್ಲೀನನಾದೆ. ಹಿಂದೆ ನಿಂತಿದ್ದ ಗೆಳೆಯರು ಗಪ್‌ಚುಪ್ ಆಗಿಬಿಟ್ಟರು.
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಬಿಎ ಪದವಿ ಓದುತ್ತಿದ್ದ ಸಮಯ. ನಾನು ಎಕನಾಮಿಕ್ಸ್, ಕನ್ನಡ ಮೇಜರ್, ಸೋಷಿಯಾಲಜಿ ತೆಗೆದುಕೊಂಡಿದ್ದೆ. ಹುಡುಗಾಟದ ದಿನಗಳಾದ್ದರಿಂದ, ದಿನಾ ಒಂದಿಲ್ಲೊಂದು ತರಲೆ-ತುಂಟಾಟ ನಡೆಸುತ್ತಿದ್ದೆವು. ನಮ್ಮ ಕ್ಲಾಸಿನಲ್ಲೊಬ್ಬ “ಸ’ ಅಕ್ಷರವನ್ನು ವಿಚಿತ್ರವಾಗಿ ಬರೆಯುತ್ತಿದ್ದ. ಅದು ಕೂಡ ನಮಗಾಗ ಬಹಳ ತಮಾಷೆಯ ವಿಷಯವಾಗಿತ್ತು. ಯಾವುದಾದರೂ ಖಾಲಿ ತರಗತಿ ಕಂಡರೆ, ಬೋರ್ಡ್ ಮೇಲೆ ಚಾಕ್‌ಪೀಸಿನಿಂದ ಆತ ಬರೆಯುತ್ತಿದ್ದ ಮಾದರಿಯಲ್ಲೇ “ಸ’ ಎಂದು ಬರೆದು ಸಂಭ್ರಮಿಸುತ್ತಿದ್ದೆವು.
ಒಮ್ಮೆ ಹೀಗೆ ಖಾಲಿ ತರಗತಿಯೊಂದು ಕಂಡಿತು. ನಾನು ಮತ್ತು ಸ್ನೇಹಿತರಾದ ಗಿರೀಶ, ಉಮೇಶ, ಪರಮೇಶ್ವರ ನಾಯ್ಕ ಆ ತರಗತಿಯೊಳಗೆ ನುಗ್ಗಿದೆವು. ಚಾಕ್‌ಪೀಸ್ ಕೈಗೆ ಸಿಕ್ಕಿದ್ದರಿಂದ ಸ್ನೇಹಿತನಂತೆ “ಸ’ ಅಕ್ಷರವನ್ನು ಪದೇ ಪದೆ ಬರೆದು ಸಂಭ್ರಮಿಸಿದೆವು. ಅದು ಬೋರ್ ಆದಾಗ ನಾನೊಂದು ಐಡಿಯಾ ಕೊಟ್ಟೆ. ವಚನಕಾರರ ಹೆಸರನ್ನು ಮೊದಲಿಂದ ಬರೆಯುವ ಬದಲು ಉಲ್ಟಾ ಬರೆಯಬೇಕು. ಯಾರು ತಪ್ಪಿಲ್ಲದೆ, ವೇಗವಾಗಿ ಬರೆಯುತ್ತಾರೆ ನೋಡೋಣ ಅಂದೆ. ಇದರಿಂದ ಸಂತಸಗೊಂಡ ಸ್ನೇಹಿತರು, “ನೀನು ವಚನಕಾರ ಜೇಡರ ದಾಸಿಮಯ್ಯ ಅವರ ಹೆಸರನ್ನು ಉಲ್ಟಾ ಬರೆದು ತೋರಿಸು’ ಎಂದು ಸವಾಲು ಹಾಕಿದರು.
ನನಗೆ ಸಿಕ್ಕಿದ್ದ ಚಾಕ್‌ಪೀಸ್ ಸಣ್ಣದಾಗಿದ್ದರಿಂದ ಕಷ್ಟಪಟ್ಟು, ಜೇಡರ ದಾಸಿಮಯ್ಯ ಎಂಬ ಹೆಸರನ್ನು ಬೋರ್ಡ್ ಮೇಲೆ ಉಲ್ಟಾಪಲ್ಟ ಬರೆಯುತ್ತಿದ್ದೆ. ಅಷ್ಟರಲ್ಲಿ ಸ್ನೇಹಿತ, “ಗಿರೀ … ಗಿರೀ’ ಎಂದು ಕೂಗಿಕೊಂಡ. ಅದು ನನಗೆ ಕೇಳಿಸಿತಾದರೂ, ಅವರು ನನ್ನ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು, ಅದನ್ನು ನಿರ್ಲಕ್ಷಿಸಿ ಬರೆಯುವುದರಲ್ಲಿ ತಲ್ಲೀನನಾದೆ. ಹಿಂದೆ ನಿಂತಿದ್ದ ಗೆಳೆಯರು ಗಪ್‌ಚುಪ್ ಆಗಿಬಿಟ್ಟರು.
ಏನಾಯಿತೆಂದು ಹಿಂದಕ್ಕೆ ತಿರುಗಿ ನೋಡುತ್ತೇನೆ: ಇಂಗ್ಲಿಷ್ ಪ್ರಾಧ್ಯಾಪಕರಾದ ಗೌರಿಶಂಕರ್ ಸರ್ ನಿಂತಿದ್ದಾರೆ! ಅವರು ಮೊದಲೇ ಸಿಟ್ಟಿನ ಮನುಷ್ಯ. ಕ್ಲಾಸಿನಲ್ಲಿ ಯಾರಾದರೂ ಕಿತಾಪತಿ ಮಾಡಿದ್ದನ್ನು ಕಂಡರೆ ಕಪಾಳಕ್ಕೆ ಎರಡು ಬಿಗಿದು, ಎಲ್ಲರೆದುರೂ ಮಂಗಳಾರತಿ ಮಾಡುತ್ತಿದ್ದರು. ಅವರ ಹೆಸರು ಕೇಳಿದರೇ ಹುಡುಗರು ಹೆದರುತ್ತಿದ್ದರು. ಅಲ್ಲಿ ಅವರನ್ನು ಕಂಡೊಡನೆ ನನ್ನ ಜಂಘಾಬಲವೇ ಉಡುಗಿ ಹೋಯ್ತು. “ಗಿರಿ, ಏನು ಬರೀತಿದ್ದೀಯಾ?’ ಎಂದು ಪರಿಶೀಲಿಸಿದರು. ಜೇಡರ ದಾಸಿಮಯ್ಯರ ಹೆಸರನ್ನು ಉಲ್ಟಾ ಬರೆದಿದ್ದನ್ನು ನೋಡಿ, “ಓ ವಚನಕಾರರ ಹೆಸರು ಬರೆದಿದ್ದೀಯ! ಬೇರೆ ಏನಾದರೂ ಅಶ್ಲೀಲ ಪದ ಬರೆದಿದ್ದರೆ ಒಂದು ಗತಿ ಕಾಣಿಸುತ್ತಿದ್ದೆ ನಿನಗೆ’ ಎಂದು ಹೇಳಿ ಹೊರಟು ಹೋದರು. ಯಾಕಂದ್ರೆ, ಕಾಲೇಜಿನ ಕಾಂಪೌಂಡ್, ಗೋಡೆ, ಬೆಂಚು, ಬೋರ್ಡ್‌ನ ಮೇಲೆ, ಕೆಲ ಹುಡುಗರು ಪೋಲಿ ಶಬ್ದಗಳನ್ನು ಕೆತ್ತಿದ್ದರು.
ಅವರು ಹೋದ ನಂತರ ಸ್ನೇಹಿತ ಗಿರೀಶ, “ಲೋ, ಸರ್ ಬಂದ್ರು ಅಂತ ಕೂಗಿದ್ರೂ ಬೋರ್ಡ್ ಮೇಲೆ ಬರೀತಾನೇ ಇದ್ಯಲ್ಲೋ. ಆ ಸಿಟ್ಟಿನ ಮನುಷ್ಯ ನಮ್ಮನ್ನು ಬಿಟ್ಟಿದ್ದೇ ಹೆಚ್ಚು’ ಎಂದು ಬೈದ. ಅದೇ ದಿನ, ನಮಗೆ ಇಂಗ್ಲಿಷ್ ಪಠ್ಯವಾಗಿದ್ದ “ಮರ್ಚೆಂಟ್ ಆಫ್ ವೆನಿಸ್’ ನಾಟಕ ಪ್ರದರ್ಶನ ಕೂಡ ಕಾಲೇಜಿನಲ್ಲಿ ನಡೆಯುತ್ತಿತ್ತು. ಗೌರಿ ಶಂಕರ್ ಸರ್ ಆ ನಾಟಕದ ಉಸ್ತುವಾರಿ ಹೊತ್ತಿದ್ದರು. ಟಿಕೆಟ್ ಅವರ ಬಳಿಯೇ ಸಿಗುತ್ತಿದ್ದರಿಂದ ಹೆದರುತ್ತಲೇ ಅವರ ಬಳಿ ಟಿಕೆಟ್ ಕೇಳಲು ಸ್ಟಾಫ್ರೂಮ್‌ಗೆ ಹೋದೆವು. ಆಗ ಗೌರಿ ಶಂಕರ್ ಸರ್, “ಏನಯ್ನಾ, ಜೇಡರ ದಾಸಿಮಯ್ಯ! ನಿನಗೂ ನಾಟಕದ ಟಿಕೆಟ್ ಬೇಕಾ?’ ಎಂದು ತಮಾಷೆ ಮಾಡಿದ್ದು ಇಂದಿಗೂ ನೆನಪಿದೆ. ಅಂದಿನಿಂದ ಗೆಳೆಯರು ಕೂಡಾ ಅದೇ ಹೆಸರಿನಿಂದ ನನ್ನನ್ನು ಕರೆಯುತ್ತಿದ್ದರು.
ಎ.ಆರ್.ಗಿರಿಧರ