Advertisement
“ನನ್ನ ತುಟಿ ಮೇಲೆ ಮೀಸೆ ಮೂಡಿರಬಹುದು; ಅದೂ ಪುಟ್ಟದು ಬಿಡಿ. ನನ್ನ ಎತ್ತರ ನಾಲ್ಕೈದು ಅಡಿಯನ್ನೂ ಮೀರಿರಬಹುದು; ಅದೂ ಮೋಟುದ್ದವೇ ತಾನೇ? ಆದರೆ, ನನ್ನೊಳಗಿನ ಮಗುವಿಗೆ ಇನ್ನೂ ಮೀಸೆಯೇ ಚಿಗುರಿಲ್ಲ. ಅದಿನ್ನೂ ಅಂಗೈ ಅಗಲ ತೂಗಬಹುದಾದ ಕೂಸು…’ - ಚಾರ್ಲಿ ಚಾಪ್ಲಿನ್ ಹೀಗೆ ಹೇಳುತ್ತಾ, ಪುಟ್ಟ ಮಗುವಿನಂತೆ ನಗುತ್ತಾರೆ. ಚಾಪ್ಲಿನ್ ತಮ್ಮ ಹಾಸ್ಯ ನಟನೆಯ ಅಷ್ಟೂ ಕ್ರೆಡಿಟ್ಟನ್ನು ಕೊಡುವುದು ಅವರೊಳಗಿದ್ದ ಪುಟ್ಟ ಮಗುವಿಗೆ. ಆ ಪುಟ್ಟ ಮಗುವೇ ಅವರ ಬದುಕಿನ ಅಷ್ಟೂ ಯಶಸ್ಸಿಗೆ ಕಾರಣ ಅನ್ನೋ ಮಾತುಂಟು.
Related Articles
Advertisement
ಅಮ್ಮನನ್ನು ಬಿಟ್ಟಿರಲಾಗದೇ ಚಡಪಡಿಕೆ ಹುಟ್ಟಿದರೆ; ಐಸ್‌ಕ್ರೀಮನ್ನೋ, ಚಾಕ್ಲೆಟನ್ನೋ ಕಂಡಾಗ ಬಾಯಿ ಚಪ್ಪರಿಸುವ ಆಸೆ ಹುಟ್ಟಿದರೆ; ಬಲೂನ್ ಕಂಡಾಗ ಆಟಾಡ್ಬೇಕು ಅನ್ನೋ ಆಸೆ ಜಿನುಗಿದರೆ; ಪತ್ರಿಕೆಯಲ್ಲಿ ಕಾಟೂìನ್ ನೋಡುತ್ತಾ ನಗು ಹೊಮ್ಮಿಸಿದರೆ; ಮಳೆ ಬಂದಾಗ ಪುಳಕಗೊಂಡು ಮೀಯುವ ಮನಸ್ಸಾದರೆ; ಒಂದೊಂದೇ ಬಬೂಲ್ ಗುಳ್ಳೆಗಳನ್ನು ಗಾಳಿಯಲ್ಲಿ ತೇಲಿಸುವುದರಲ್ಲಿ ಸುಖ ಸಿಕ್ಕರೆ; ಟಿವಿಯಲ್ಲಿ ಚಾನೆಲ್‌ಗಳನ್ನು ಓಡಿಸುವಾಗ, ಟಾಮ್ ಆ್ಯಂಡ್ ಜೆರ್ರಿ ನೋಡಿ, ಬಾಲ್ಯದ ನೆನಪಿಗೆ ಸರ್ರನೆ ಜಾರಿದರೆ… ಚಾಪ್ಲಿನ್ ಒಳಗಿನ ಕೂಸು, ನಿಮ್ಮೊಳಗೂ ಇದೆಯೆಂದು ಹಿಗ್ಗಬಹುದು.
“ಹೊರಗೆ ಒರಟ ಆದ್ರೂ ಅವರ ಒಳಗೊಂದು ಮಗು ಮನಸ್ಸಿದೆ’ ಅನ್ನೋ ಕೆಲವರ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬಹುದು. ಅಂದರೆ, ಬಾಯಿ ಮಾತಿನಲ್ಲಿ ಅಥವಾ ತೋರಿಕೆಗೆ ಅವರೇನೇ ಹೇಳಿದರೂ, ಅವರೇನೇ ವರ್ತನೆ ತೋರಿದರೂ, ಅವರೊಳಗಿರುವ ಅಂತಃಕರಣಕ್ಕೆ ಸ್ಪಂದಿಸುವುದು ಗೊತ್ತು ಎನ್ನುವುದು ಈ ಮಾತಿನ ತಾತ್ವರ್ಯ.
ಬಾಲ್ಯದಿಂದ ಜಿಗಿದು, ವಯಸ್ಸು ವಯಸ್ಸುಗಳನ್ನು ಮೀರುತ್ತಾ ಹೋದರೂ, ಪ್ರತಿಯೊಬ್ಬರಲ್ಲೂ ಒಂದು ಮಗು ಇದ್ದೇ ಇರುತ್ತೆ. ಆ ಮಗುವಿನ ಪ್ರತಿನಿಧಿಯೇ ನಮ್ಮ ಮೊಗದಲ್ಲಿ ಹೊಮ್ಮುವ ನಗು. ಅದು ಎಂದಿಗೂ ಅಳಿಯದ ಬಾಲ್ಯದ ಬಳುವಳಿ. ತಾರುಣ್ಯದಾಚೆಗೆ ನಮ್ಮೊಳಗೆ ಸೇರುವ ಕೋಪ, ತಾಪ, ಅಹಂಗಳ ನಡುವೆ ಆ ನಗುವನ್ನು, ಮಗುವಿನಂಥ ಪುಟ್ಟ ಪುಟ್ಟ ನಡವಳಿಕೆಗಳನ್ನು ಸಾಕಿಕೊಳ್ಳುವುದು ಕೂಡ ನಮ್ಮ ವ್ಯಕ್ತಿತ್ವವನ್ನು ಹೊಳಪೇರಿಸುವಂತೆ ಮಾಡುವ ಅಮೂಲ್ಯ ಸಂಗತಿ.
ಸಣ್ಣಪುಟ್ಟ ಖುಷಿಗಳಿಗೂ ಹಿಗ್ಗುವ, ಎಲ್ಲರ ಸಂತೋಷಗಳಲ್ಲೂ ಒಂದಾಗುವ ಸಂತಸವೇ ಮಗುವಿನ ಮನಸ್ಸು. ಅದಿದ್ದರೇನೇ, ಜಗತ್ತನ್ನು ಮಂತ್ರಮುಗ್ಧಗೊಳಿಸಲು ಸಾಧ್ಯ ಎನ್ನುವ ಗುಟ್ಟೇ, ಯಶಸ್ಸಿನ ಮೊದಲ ಮೆಟ್ಟಿಲು.
ಸಾಯಿ ಕಿರಣ್ ಆರ್