Advertisement
ಪುಸ್ತಕ, ಮಗುವಿನ ತೊಟ್ಟಿಲು, ಕೊಂಚಿಗೆ ಕಲಾದಗಿ ಬಳಿ ಘಟಪ್ರಭಾ ನದಿ ದಡದಲ್ಲಿ ಅನಾಥವಾಗಿ ಬಿದ್ದಿದ್ದವು. ಮಗುವಿನ ಕೊಂಚಿಗೆ, ಪ್ರವಾಹದಲ್ಲಿ ಹರಿದು ಬಂದರೂ ಇನ್ನೂ ಶುಭ್ರವಾಗಿತ್ತು. ಇನ್ನು ಮಗು ಸ್ವಚ್ಛಂದವಾಗಿ ಆಟವಾಡಿ ಮಲಗಬೇಕಾದ ತೊಟ್ಟಿಲಲ್ಲಿ ಪಕ್ಷಿಯೊಂದು ಆಟವಾಡುತ್ತಿತ್ತು. ಇವೆಲ್ಲವನ್ನು ನೋಡಿದರೆ ಕರಳು ಕಿತ್ತು ಬರುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಘಟಪ್ರಭಾ ನದಿ ಪ್ರವಾಹಕ್ಕೆ ಇಡೀ ಮುಧೋಳ ತಾಲೂಕು ಅಕ್ಷರಶಃ ನಲುಗಿದೆ. ಪ್ರತಿ ಬಾರಿ ನದಿಗೆ ನೀರು ಬಿಡಿ ಎಂದು ಹೋರಾಟ ಮಾಡುತ್ತಿದ್ದ ಮುಧೋಳ ಭಾಗದ ರೈತರು ಈ ಬಾರಿ ಘಟಪ್ರಭೆಯ ಹರಿವು ನೋಡಿ ಕಂಗಾಲಾಗಿದ್ದಾರೆ. ನಮ್ಮ ನದಿಯಲ್ಲಿ ಇಷ್ಟೊಂದು ನೀರು ಎಂದೂ ಬಂದಿಲ್ರಿ ಎಂದು ಹುಬ್ಬೇರಿಸಿ ಮಾತನಾಡುತ್ತಾರೆ.
Related Articles
Advertisement
35 ಕಿ.ಮೀ ತೇಲಿ ಬಂತು ತೊಟ್ಟಿಲು-ಪುಸ್ತಕ: ಲೋಕಾಪುರದ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ನ 2ನೇ ತರಗತಿ ಬಾಲಕಿ ಪ್ರತಿಕ್ಷಾ ವಿ.ಕೆ ಅವಳ ಪುಸ್ತಕಗಳು, ನೋಡ್ಸ್, ಸುಂದರವಾಗಿ ಬರೆದ ಪ್ರಾಯೋಗಿಕ ಪರೀಕ್ಷೆಯ ಉತ್ತರ ಪ್ರತಿಕೆಗಳೂ ಪ್ರವಾಹದಲ್ಲಿ ತೇಲಿ, ಕಲಾದಗಿ ಬಳಿ ಬಂದು ಬಿದ್ದಿವೆ. ಬಾಲಕಿ ಬರೆದ ಉತ್ತರ ಪ್ರತ್ರಿಕೆಗಳಲ್ಲಿನ ಒಂದೊಂದು ಪ್ರಶ್ನೆಗಳು, ಪ್ರವಾಹದ ರುದ್ರನರ್ತನಕ್ಕೆ ಸಾಕ್ಷಿ ಎಂಬಂತಿದ್ದವು. ಶಬ್ದಗಳ ಅರ್ಥ ಬರೆಯುವ ಪ್ರಶ್ನೆಗಳಿಗೆ ಬಾಲಕಿ ಅಕ್ಷತಾ ವಿ.ಕೆ. ಉತ್ತರಿಸಿದ್ದು, ಸಹಿಸು ಎಂಬ ಪ್ರಶ್ನೆ ಅದರಲ್ಲಿತ್ತು ಆದರೆ, ಆ ಪ್ರಶ್ನೆಗೆ ಬಾಲಕಿ ಬಯಕೆ ಎಂಬ ಅರ್ಥ ಬರೆದಿದ್ದು, ಅದು ತಪ್ಪಾಗಿ, ಒಂದು ಅಂಕ ಕಳೆದುಕೊಂಡಿದ್ದಳು. ಪ್ರವಾಹವೂ, ಮಗುವೇ ನನ್ನ ರೌದ್ರಾವತಾರಕ್ಕೆ ನೀನು ಸಹಿಸಿಕೋ ಎಂಬಂತಿತ್ತು.
ಒಡಲು ಒಡೆದಾಗ ಉಳಿದವು ಹತ್ತೂರು: ಪ್ರವಾಹದಿಂದ ರಸ್ತೆ, ಭೂಮಿ, ಬೆಳೆ, ಸೇತುವೆ, ಮನೆ ಎಲ್ಲವೂ ಹಾಳಾಗಿವೆ. ಇಲ್ಲೊಂದು ಸೇತುವೆ ಒಡೆದಿದ್ದಕ್ಕೆ ಹತ್ತೂರಿನ ಜನರು ಸಂಕಷ್ಟದಿಂದ ಪಾರಾಗಿದ್ದಾರೆ. ಕಲಾದಗಿ-ಕಾತರಕಿ ಸೇತುವೆ ಎರಡೂ ಭಾಗದ ಮಣ್ಣು-ಖಡಿ ಮಿಶ್ರಿತ ಎತ್ತರದ ರಸ್ತೆ (ಸೇತುವೆ ಎರಡೂ ಭಾಗದಲ್ಲಿರುವ ಒಡ್ಡು) ಒಡೆದು ಹೋಗಿದ್ದು, ಇದರಿಂದ ಕಲಾದಗಿ-ಕಾತರಕಿ ಬ್ಯಾರೇಜ್ ಸಹಿತ ಸೇತುವೆಗೆ ನೀರು ಬಂದು ಅಪ್ಪಳಿಸಿ, ಪುನಃ ಹಿನ್ನೀರಾಗಿ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳ ತುಂಬ ನೀರು ನುಗ್ಗುತ್ತಿತ್ತು. ಆದರೆ, ಸೇತುವೆ ಎರಡೂ ಭಾಗ ಕೊಚ್ಚಿ ಹೋಗಿದ್ದರಿಂದ ಕಾತರಕಿ, ಕೊಪ್ಪ ಎಸ್.ಕೆ, ನಿಂಗಾಪುರ, ಅಂಕಲಗಿ, ಶಾರದಾಳ, ಉದಗಟ್ಟಿ, ಬಂಟನೂರ, ಮಾಚಕನೂರ ಮುಂತಾದ 10ಕ್ಕೂ ಹೆಚ್ಚು ಹಳ್ಳಿಗಳು ಇನ್ನಷ್ಟು ಅನುಭವಿಸುತ್ತಿದ್ದ ಸಂಕಷ್ಟ ದೂರಾಗಿದೆ.
ಬಂಟನೂರ ಉಳಿಸಿದವು ಬಾವಿ!: ಕಲಾದಗಿ- ಕಾತರಗಿ ಸೇತುವೆ ರಸ್ತೆ ಕೊಚ್ಚಿ ಹೋಗಿದ್ದರಿಂದ ಹತ್ತೂರ ಹಳ್ಳಿಯ ಸಂಕಷ್ಟ ದೂರಾಗಿದ್ದರೆ, ಮುಧೋಳ ತಾಲೂಕು ಬಂಟನೂರ ಪೂರ್ಣ ಮುಳುಗಡೆಯಾಗುವುದನ್ನು ನಾಲ್ಕು ಐತಿಹಾಸಿಕ ಬಾವಿಗಳು ಉಳಿಸಿವೆ ಎಂದರೆ ನಂಬಲೇಬೇಕು.
ಬಂಟನೂರ, ಘಟಪ್ರಭಾ ನದಿಯಿಂದ ಒಂದೂವರೆ ಕಿ.ಮೀ ದೂರದಲ್ಲಿದ್ದು, ನದಿ ತುಂಬಿ ಹರಿದಾಗ, ಗ್ರಾಮದ ಹತ್ತಿರಕ್ಕೆ ನೀರು ಬರುತ್ತಿತ್ತು. ಈ ಬಾರಿ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು. ಸುಮಾರು 261 ಮನೆಗಳ ಮೇಲೆ ನೀರು ಬಂದಿತ್ತು. ಇನ್ನೂ ನೀರು ಹೆಚ್ಚಾಗುತ್ತಲೇ ಇತ್ತು. ಆ ಸಂದರ್ಭದಲ್ಲಿ ಊರ ಮುಂದೆ ಇರುವ ಸಾಹುಕಾರ ಬಾವಿ, ಪೊಲೀಸ್ ಬಾವಿ, ಬಸು ನಾಯ್ಕ ಮತ್ತು ಪಾಟೀಲ ಬಾವಿ ಎಂಬ ನಾಲ್ಕು ಬಾವಿಗಳಿದ್ದು, ಈ ಬಾವಿಗಳಿಗೆ ಸುರಂಗ ಮಾರ್ಗಗಳಿವೆ. ಎಷ್ಟೇ ನೀರು ಹರಿದರೂ ಈ ಬಾವಿಗಳು ತುಂಬಿದ ಉಹಾದರಣೆ ಇಲ್ಲ. ಇಷ್ಟೊಂದು ಪ್ರವಾಹ ಬಂದು ಇಡೀ ಬಾವಿಯ ಮೇಲೆ ನೀರು ನಿಂತಿದ್ದರೂ ಸುಳಿಯ ರೀತಿ ನೀರು ಒಳ ಹೋಗುತ್ತಿತ್ತು. ದೊಡ್ಡ ಪ್ರವಾಹ ಬಂದು ಹೋದರೂ, ಸದ್ಯ ಈ ಬಾವಿಗಳಲ್ಲಿ ಹನಿ ನೀರಿಲ್ಲ. ಈ ಬಾವಿಗಳಿಗೆ ಸುಳಿಯಂತೆ ಭಾರಿ ಪ್ರಮಾಣದ ನೀರು ಹೊಕ್ಕಿದ್ದರ ಪರಿಣಾಮ, ಊರೊಳಗೆ ಇನ್ನೂ ನುಗ್ಗಲಿದ್ದ ನೀರು ಕಡಿಮೆಯಾಯಿತು ಎನ್ನುತ್ತಾರೆ ಗ್ರಾಮಸ್ಥರು.
•ಶ್ರೀಶೈಲ ಕೆ. ಬಿರಾದಾರ