Advertisement

ನಗರದಲ್ಲಿ ಎ, ಎಬಿ ಗುಂಪಿನ ರಕ್ತದ ತೀವ್ರ ಕೊರತೆ !

10:41 PM May 09, 2019 | Sriram |

ವಿಶೇಷ ವರದಿ- ಮಹಾನಗರ: ನಗರದ ಕೆಲವು ಆಸ್ಪತ್ರೆಗಳಲ್ಲಿ ಕೆಲವು ದಿನಗಳಿಂದ ರಕ್ತದ ಕೊರತೆ ತೀವ್ರವಾಗಿದೆ. ಅದರಲ್ಲೂ ಎ ಮತ್ತು ಎಬಿ ರಕ್ತದ ಗುಂಪುಗಳ ಸಂಗ್ರಹ ಶೂನ್ಯವಾಗಿದ್ದು, ಈ ಗುಂಪಿನ ರಕ್ತ ಅವಶ್ಯವಿರುವವರು ಪರದಾಡುವಂತಾಗಿದೆ.
ಕೆಂಪು ರಕ್ತ ಕಣದ ಆವಶ್ಯಕತೆ ತೀರಾ ಹೆಚ್ಚಿದ್ದು, ಅದರ ಕೊರತೆಯೂ ಎದುರಾಗಿದೆ. ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರದಲ್ಲಿ ಸದ್ಯ 677 ಬ್ಯಾಗ್‌ ಪ್ಲಾಸ್ಮಾ, 249 ಬ್ಯಾಗ್‌ ಕೆಂಪು ರಕ್ತ ಕಣ, 23 ಬ್ಯಾಗ್‌ ಪ್ಲೇಟ್‌ಲೆಟ್‌ನ್ನು ಪ್ರತ್ಯೇಕಿಸಿಡಲಾಗಿದೆ. ಒ ಪಾಸಿಟಿವ್‌ ಗುಂಪಿನ 200 ಯುನಿಟ್‌, ಬಿ ಪಾಸಿಟಿವ್‌ ಗುಂಪಿನ 100 ಯುನಿಟ್‌ ಕೆಂಪು ರಕ್ತಕಣಗಳನ್ನು ಪ್ರತ್ಯೇಕಿಸಿದ್ದರೆ. ಎ ಮತ್ತು ಎಬಿ ರಕ್ತದ ಗುಂಪು ಸಂಗ್ರಹ ಶೂನ್ಯವಾಗಿದೆ. ಎ ನೆಗೆಟಿವ್‌, ಎಬಿ ನೆಗೆಟಿವ್‌, ಬಿ ನೆಗೆಟಿವ್‌ ಕೂಡ ಕಡಿಮೆ ಇದೆ. ಕೆಂಪು ರಕ್ತ ಕಣಗಳ ಜೀವಿತಾವಧಿ ಕೇವಲ 35 ದಿನಗಳಾದ್ದರಿಂದ ತುಂಬಾ ದಿನಗಳ ಕಾಲ ಸಂಗ್ರಹಿಸಿಡುವುದೂ ಸಾಧ್ಯವಾಗುತ್ತಿಲ್ಲ. ಅಗತ್ಯತೆ ಇರುವವರಿಗೆ ಈ ಕೆಂಪು ರಕ್ತಕಣಗಳನ್ನು ನೀಡಲಾಗುತ್ತದೆ.

Advertisement

ಪ್ರಸ್ತುತ ಬಿ ಪಾಸಿಟಿವ್‌, ಒ ಪಾಸಿಟಿವ್‌, ಎ ಪಾಸಿಟಿವ್‌ ಮತ್ತು ಎಬಿ ಪಾಸಿಟಿವ್‌ ರಕ್ತದ ಗುಂಪುಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಎ ಪಾಸಿಟಿವ್‌ ಮತ್ತು ಎಬಿ ಪಾಸಿಟಿವ್‌ ಸಂಗ್ರಹ ಇಲ್ಲದೆ ರಕ್ತ ಪೂರೈಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಕಡಿಮೆ ಯಾಗಿರುವುದರಿಂದ ಪ್ಲೇಟ್‌ಲೆಟ್‌ ಅಂಶಕ್ಕೆ ಬೇಡಿಕೆ ಕಡಿಮೆ. ಪ್ಲಾಸ್ಮಾಕ್ಕೂ ಅಷ್ಟೇನು ಬೇಡಿಕೆ ಇಲ್ಲದಿರುವುದರಿಂದ ಅವುಗಳಿಗೆ ಕೊರತೆ ಉಂಟಾಗಿಲ್ಲ.

400 ಯುನಿಟ್‌ ರಕ್ತ ಆವಶ್ಯಕತೆ
ನಗರದಲ್ಲಿ ದಿನಂಪ್ರತಿ 400 ಯುನಿಟ್‌ನಷ್ಟು ರಕ್ತದ ಅಗತ್ಯವಿದೆ. ದಿನಕ್ಕೆ 7-8 ಯುನಿಟ್‌ನಂತೆ ತಿಂಗಳಿಗೆ ಸುಮಾರು 250-300 ಯುನಿಟ್‌ ರಕ್ತ ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವವರಿಗೆ ಬೇಕಾಗುತ್ತದೆ. ಈಗ ರಕ್ತದ ತೀವ್ರವಾದ ಕೊರತೆಯಿಂದ ಈ ರೋಗಿಗಳಿಗೂ ಪೂರೈಸಲು ಪರದಾಡುವಂತಾಗಿದೆ.

ವೆನ್ಲಾಕ್‌ ಆಸ್ಪತ್ರೆ, ಲೇಡಿಗೋಶನ್‌ ಆಸ್ಪತ್ರೆ ಸಹಿತ ನಗರದ ಕೆಲವು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ತೀವ್ರವಾಗಿದೆ. ರಕ್ತದಾನ ಮಾಡುವಂತೆ ವೆನಾÉಕ್‌ ರಕ್ತನಿಧಿ ಕೇಂದ್ರದಿಂದ ವಿವಿಧ ಸಂಘ – ಸಂಸ್ಥೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಗುರುವಾರ ಕೆಎಂಸಿ, ವೆನ್ಲಾಕ್‌ ನೇತೃತ್ವದಲ್ಲಿ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಇದರಿಂದ ಒಟ್ಟು 220 ಯೂನಿಟ್‌ ರಕ್ತ ಸಂಗ್ರಹವಾಗಿದೆ ಎಂದು ವೆನ್ಲಾಕ್‌ ರಕ್ತನಿಧಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೊರತೆಗೆ ಕಾರಣ ಸದ್ಯ ಶಾಲಾ-ಕಾಲೇಜುಗಳಿಗೆ ರಜೆ. ಹೆಚ್ಚಾಗಿ ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ರಜೆ ಸಂದರ್ಭ ರಕ್ತಕ್ಕೆ ಕೊರತೆ ಉಂಟಾಗುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಇಲ್ಲಿವರೆಗೆ ಕೇವಲ ಸುಮಾರು 30 ರಕ್ತದಾನ ಶಿಬಿರಗಳು ನಡೆದಿವೆ. ಇದು ಕೂಡ ಕೊರತೆಗೆ ಕಾರಣ. ಮುಂದೆ ಹೆಚ್ಚು ಶಿಬಿರ ಆಯೋಜಿಸುವಲ್ಲಿ ಗಮನ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

93 ತಲೆಸ್ಸೇಮಿಯಾ ರೋಗಿಗಳು
ವೆನ್ಲಾಕ್‌ ಆಸ್ಪತ್ರೆಯಲ್ಲಿ ಸದ್ಯ 93 ಮಂದಿ ತಲೆಸ್ಸೇಮಿಯಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶರೀರದಲ್ಲಿ ರಕ್ತ ಕಣಗಳು ಉತ್ಪತ್ತಿಯಾಗದೆ ದಿನಗಳೆದಂತೆ ಇಂತಹ ರೋಗಿಗಳಲ್ಲಿ ರಕ್ತ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರತಿ ತಿಂಗಳು ಇಂತಹ ರೋಗಿಗಳಿಗೆ ರಕ್ತ ಅವಶ್ಯವಾಗಿರುವುದರಿಂದ ದಾನಿಗಳ ಸಹಾಯದಿಂದಲೇ ಅವರ ಬದುಕು ಸಾಗುತ್ತಿರುತ್ತದೆ. ನಿತ್ಯ 7-8 ಯುನಿಟ್‌ ರಕ್ತ ಈ ರೋಗಿಗಳಿಗೆ ಅವಶ್ಯವಿರುತ್ತದೆ.

953 ಯುನಿಟ್‌ ಸಂಗ್ರಹ
ಮಂಗಳೂರಿನಲ್ಲಿ ಪ್ರತಿ ವರ್ಷ ಸರಾಸರಿ 80 ಸಾವಿರ ಯುನಿಟ್‌ ರಕ್ತದ ಆವಶ್ಯಕತೆ ಇದೆ. ಕೆಲವೊಮ್ಮೆ ಬೇಡಿಕೆ ಇರುವಷ್ಟು ರಕ್ತ ಸಂಗ್ರಹವಾದರೆ, ಕೆಲವೊಮ್ಮೆ ಕಡಿಮೆಯಾಗುತ್ತದೆ. ಎಪ್ರಿಲ್‌-ಮೇ ತಿಂಗಳಿನಲ್ಲಿ ರಕ್ತದ ಕೊರತೆ ಉಂಟಾಗುವುದು ಹೆಚ್ಚು. 2018ರ ಎಪ್ರಿಲ್‌- ಮೇ ತಿಂಗಳಿನಲ್ಲಿ ಒಟ್ಟು 51 ಶಿಬಿರಗಳು ಜಿಲ್ಲೆಯ ವಿವಿಧೆಡೆ ನಡೆದಿದ್ದು, 8,376 ಯುನಿಟ್‌ ರಕ್ತ ಸಂಗ್ರಹವಾಗಿತ್ತು. 2019ರ ಎಪ್ರಿಲ್‌, ಮೇ 9ರ ವರೆಗೆ ಸುಮಾರು 30 ಶಿಬಿರ ನಡೆದಿದ್ದು, 953 ಯುನಿಟ್‌ ರಕ್ತ ಸಂಗ್ರಹವಾಗಿದೆ.

 ಬೇಡಿಕೆಗೆ ತಕ್ಕಂತೆ ಸಂಗ್ರಹವಿಲ್ಲ
ಎ,ಎಬಿ ರಕ್ತದ ಗುಂಪಿಗೆ ತೀವ್ರ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಸಂಗ್ರಹ ಇಲ್ಲದಿರುವುದರಿಂದ ರಕ್ತದ ಕೊರತೆ ಎದುರಾಗಿದೆ. ಈಗಾಗಲೇ ವಿವಿಧ ಸಂಘ-ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಗುರುವಾರ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ.
– ಡಾ| ಶರತ್‌ಕುಮಾರ್‌, ಮುಖ್ಯಸ್ಥರು, ರಕ್ತನಿಧಿ ಕೇಂದ್ರ ವೆನ್ಲಾಕ್‌ ಆಸ್ಪತ್ರೆ

ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರದಲ್ಲಿ ಸದ್ಯ ಪ್ರತ್ಯೇಕಿಸಿಡಲಾದ ರಕ್ತಕಣ
ರಕ್ತದ ಗುಂಪು          ಕೆಂಪುರಕ್ತ   ಕಣ   ಪ್ಲಾಸ್ಮಾ ಪ್ಲೇಟ್‌ಲೆಟ್ಸ್‌
ಎ ಪಾಸಿಟಿವ್‌               0        112              4
ಬಿ ಪಾಸಿಟಿವ್‌               73      188            10
ಒ ಪಾಸಿಟಿವ್‌               173     270            8
ಎಬಿ ಪಾಸಿಟಿವ್‌           0         107             1
ಎ ನೆಗೆಟಿವ್‌                0          0               0
ಬಿ ನೆಗೆಟಿವ್‌                0          0               0
ಒ ನೆಗೆಟಿವ್‌                3          0               0
ಎಬಿ ನೆಗೆಟಿವ್‌             0         0               0|

ಒಟ್ಟು                       249      677            23

Advertisement

Udayavani is now on Telegram. Click here to join our channel and stay updated with the latest news.

Next