ಗದಗ: ಕೋವಿಡ್-19 ಸೋಂಕಿನಿಂದ ಗುಣಮುಖರಾದ 61 ವರ್ಷದ (ಪಿ. 912) ವೃದ್ಧ ಶನಿವಾರ ಇಲ್ಲಿನ ನಿಗದಿತ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇದರಿಂದ ಜಿಮ್ಸ್ ವೈದ್ಯರ ಔಷಧೋಪಾಚಾರದಿಂದಾಗಿ ಐವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿರುವುದು ಜಿಲ್ಲೆಯ ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ.
ಇಲ್ಲಿನ ಗಂಜಿಬಸವೇಶ್ವರ ವೃತ್ತದ ನಿವಾಸಿಯಾಗಿರುವ (ಪಿ. 912) ವೃದ್ಧನಿಗೆ ಏ. 30ರಂದು ಸೋಂಕು ದೃಢಪಟ್ಟಿತ್ತು. ಅದೇ ಪ್ರದೇಶದ ಪಿ. 514 ಪ್ರಕರಣದೊಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ ಎನ್ನಲಾಗಿತ್ತು. ಸೋಂಕು ದೃಢ ಪಡುತ್ತಿದ್ದಂತೆ ಮಲ್ಲಸಮುದ್ರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಕಳೆದ 15 ದಿನಗಳ ಕಾಲ ವೈದ್ಯರು ಹಗಲಿರುಳು ಶ್ರಮಿಸಿದ ಫಲವಾಗಿ ಕೋವಿಡ್ ಸೋಂಕಿನಿಂದ ಪಿ. 912 ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿನಿಂದ ಸಂಪೂರ್ಣಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರೆಡ್ಡಿ ಫಲಪುಷ್ಪ ನೀಡಿ, ಶುಭ ಕೋರಿದರು. ಮಾಸ್ಕ್, ಸ್ಯಾನಿಸೈಸರ್ ಹಾಗೂ ದಿನನಿತ್ಯದ ಅವಶ್ಯಕ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಬಿ.ಸಿ. ಕರಿಗೌಡರ, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಜಿಲ್ಲೆಯ ಐವರು ಗುಣಮುಖ: ಇದರಿಂದಾಗಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು 12 ಕೋವಿಡ್ ಪ್ರಕರಣಗಳಲ್ಲಿ ಐವರು ಗುಣಮುಖರಾಗಿದ್ದಾರೆ. ಮೇ 1ರಂದು ರಂಗನವಾಡದ ಸೋಂಕಿತ (ಪಿ. 304) ಮಹಿಳೆ ಜಿಲ್ಲೆಯಲ್ಲಿ ಮೊದಲ ಬಾರಿಗೆಗುಣಮುಖರಾಗಿದ್ದರು. ಬಳಿಕ ಮೇ 9ರಂದು ಮೂವರು (ಪಿ. 370, ಪಿ. 396, ಪಿ. 514) ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ.
ಇದೀಗ ಗಂಜೀಬಸವೇಶ್ವರ ಭಾಗದ 61 ವರ್ಷದ ಹಿರಿಯ ನಾಗರಿಕರೊಬ್ಬರು ಬಿಡಗಡೆಯಾಗಿದ್ದಾರೆ. ಇದರಿಂದ ಜಿಮ್ಸ್ ವೈದ್ಯರ ಔಷಧೋಪಾಚಾರದೊಂದಿಗೆ ಜಿಲ್ಲೆಯ ಐವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿ ಸಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ.