ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೆ ಹೊಳೆಗೆ ಅಡ್ಡಲಾಗಿರುವ ಕೋಣಬಗೆ – ಅಚ್ಲಾಡಿ ಸಂಪರ್ಕ ಸೇತುವೆ ಅಪಾಯದಲ್ಲಿದ್ದು ಮುರಿದು ಬೀಳುವಂತಿದೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾವಿನ ಮನೆಯ ಕದ ತಟ್ಟುತ್ತಿದೆೆ ಶಿಥಿಲ ಕಿರು ಸೇತುವೆ
ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸೇತುವೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಹಿಟಾಚಿ ಯಂತ್ರಗಳನ್ನು ಬಳಸಿ ಅವ್ಯಾಹತವಾಗಿ ಮರಳುಗಾರಿಕೆ ನಡೆಸುವ ಪರಿಣಾಮ ಸೇತುವೆ ಮುರಿದು ಅಪಾಯದ ಮಟ್ಟವನ್ನು ತಲುಪಲು ಕಾರಣವಾಗಿದೆ.
ಮಳೆಗಾಲದಲ್ಲಿ ನೀರಿನ ಒಳಹರಿವಿನ ತೀವ್ರತೆ ಹೆಚ್ಚಾಗಿರುವುದರಿಂದ ಈಗಾಗಲೇ ಸೇತುವೆ ಮಧ್ಯ ಭಾಗ ಮುರಿದು ಹೋಗಿದೆ. ಇದನ್ನು ದುರಸ್ತಿಪಡಿಸದೆ ಹೋದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪರ್ಕ ಕೊಂಡಿ
ಬೇಳೂರು ಗ್ರಾಮದಿಂದ ಅಚ್ಲಾಡಿ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವಿನಿಂದಾಗಿ ಎರಡು ಗ್ರಾಮಗಳಿಗೆ ಸುಮಾರು 2 ಕಿ.ಮೀ. ಸಮೀಪದ ಅಂತರದಲ್ಲಿ ಸಂಧಿಸಬಹುದು. ಇಲ್ಲದಿದ್ದಲ್ಲಿ ಸುಮಾರು 8 ಕಿ.ಮೀ. ಸುತ್ತುವರಿದು ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು.
ಇದರಲ್ಲಿ ಯಾವುದೇ ರಾಜಕೀಯ ಮಾಡದೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ತತ್‌ಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
– ಲೋಕೇಶ್ ಆಚಾರ್ಯ ತೆಕ್ಕಟ್ಟೆ