ಹಳೆಯ ಚಿತ್ರಗಳ ಹೆಸರನ್ನು ಇಟ್ಟರೆ, ಚಿತ್ರ ಹಿಟ್ ಆಗುತ್ತದಾ?
ಗೊತ್ತಿಲ್ಲ. ಸದ್ಯಕ್ಕೆ ಹಾಗೆ ಹಳೆಯ ಹೆಸರುಗಳನ್ನಿಟ್ಟು, ಹೊಸದಾಗಿ ಮಾಡಲಾಗಿರುವ ಚಿತ್ರಗಳೆಲ್ಲವೂ ಸೋತಿವೆ. ಆದರೂ ಕನ್ನಡ ಚಿತ್ರರಂಗದಲ್ಲಿ ಹಳೆಯ ಚಿತ್ರಗಳ ಶೀರ್ಷಿಕೆಗಳಿಗೆ ಮಾರು ಹೋಗುತ್ತಿರುವುದು ಹೊಸ ಬೆಳವಣಿಗೆ. ಹಾಗೊಮ್ಮೆ ಲೆಕ್ಕ ಹಾಕಿದರೆ, ಸುಮಾರು ಮೂವತ್ತಕ್ಕೂ ಹೆಚ್ಚು ಹೊಸಬರ ಚಿತ್ರಗಳು ಹಳೆಯ ಚಿತ್ರಗಳ ಶೀರ್ಷಿಕೆಯನ್ನೇ ಇಟ್ಟುಕೊಂಡು ಬಂದಿವೆ. ಬರುತ್ತಲೂ ಇವೆ. ಅದರಲ್ಲೂ ಸ್ಟಾರ್ ನಟರ ಚಿತ್ರಗಳ ಶೀರ್ಷಿಕೆಗಳೇ ರಿಪೀಟ್ ಆಗುತ್ತಿವೆ ಎಂಬುದು ವಿಶೇಷ. ಇಷ್ಟಕ್ಕೂ ಈ ರಿಪೀಟ್ ಟೈಟಲ್‌ನ ಹಿಂದಿನ ರಹಸ್ಯವೇನಾದರೂ ಇದೆಯಾ? ಗೊತ್ತಿಲ್ಲ. ಆದರೆ, ಅದೊಂದು ಕುತೂಹಲ ಹುಟ್ಟು ಹಾಕುವುದಂತೂ ದಿಟ. ಹಳೇ ಶೀರ್ಷಿಕೆ ಇಟ್ಟುಕೊಂಡರೆ, ತಾನಾಗಿಯೇ ಒಂದಷ್ಟು ಕ್ರೇಜ್ ಹೆಚ್ಚಿಸುತ್ತೆ ಎಂಬ ನಂಬಿಕೆ, ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ಅದೊಂದು ಮಾರ್ಕೆಟಿಂಗ್ ಪ್ಲಾನ್ ಕೂಡ ಹೌದು. ಯಶಸ್ವಿ ಚಿತ್ರಗಳ ಶೀರ್ಷಿಕೆ ಮರುಬಳಕೆ ಮಾಡುವ ಹೊಸಬರ ಸಂಖ್ಯೆ ಜಾಸ್ತಿಯಾಗಿದೆ. ಅದು “ಫೇಮ್’ ಮುಂದುವರೆಸುವ ಒಂದು ವಿಧಾನವಷ್ಟೇ. ಸೂಕ್ಷ್ಮವಾಗಿ ಗಮನಿಸಿದರೆ, ಸಕ್ಸಸ್ ಚಿತ್ರಗಳ ಶೀರ್ಷಿಕೆ ಇಟ್ಟುಕೊಂಡ ಚಿತ್ರಗಳಾವೂ ಸುದ್ದಿ ಮಾಡಿಲ್ಲ, ಅವುಗಳ ಸದ್ದೂ ಕೇಳಿಲ್ಲ.
ಹಾಗೊಮ್ಮೆ ಗಮನಿಸಿದರೆ, ಕನ್ನಡದ ಕೆಲ ನಟರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನೇ ಇಟ್ಟುಕೊಂಡು ಹೊಸಬರು ಚಿತ್ರ ಮಾಡಿರುವುದುಂಟು. ಆದರೆ, ಗೆಲುವಿನ ಲೆಕ್ಕ ಮಾತ್ರ ಇಲ್ಲ. ಡಾ.ರಾಜಕುಮಾರ್, ಮಂಜುಳ ಅಭಿನಯದ “ಎರಡು ಕನಸು’ ಎವರ್‌ಗ್ರೀನ್ ಸಿನಿಮಾ. ಇದೇ ಶೀರ್ಷಿಕೆಯಡಿ, ವಿಜಯ್ ರಾಘವೇಂದ್ರ ಅಭಿನಯದ “ಎರಡು ಕನಸು’ ಚಿತ್ರ ರಿಲೀಸ್ ಆಯ್ತು. ಚಿತ್ರವೆಲ್ಲೂ ಸದ್ದು ಮಾಡಲಿಲ್ಲ. ಹೀಗೆ ಬಂದು ಹಾಗೆ ಹೋಯ್ತು. ವಿಷ್ಣುವರ್ಧನ್ ನಟಿಸಿದ “ನಾಗರಹಾವು’ ಶೀರ್ಷಿಕೆ ಎರಡು ಸಲ ಬಳಕೆಯಾಗಿದೆ. ಉಪೇಂದ್ರ ಈ ಹಿಂದೆ “ನಾಗರಹಾವು’ ಮಾಡಿದ್ದರು. ಅದು ಹೇಳಿಕೊಳ್ಳುವ ಸಿನಿಮಾ ಎನಿಸಿಕೊಳ್ಳಲಿಲ್ಲ. ಅದಾದ ನಂತರ ರಮ್ಯಾ, ದಿಗಂತ್ ಅಭಿನಯದಲ್ಲೂ “ನಾಗರಹಾವು’ ಶೀರ್ಷಿಕೆ ಮರುಬಳಸಿ ಗ್ರಾಫಿಕ್ಸ್‌ನಲ್ಲೊಂದು ಚಿತ್ರ ಮಾಡಲಾಯಿತು.
ಅದೂ ಕೂಡ “ಹೆಡೆ’ ಬಿಚ್ಚಲಿಲ್ಲ. ಶಂಕರ್ ನಾಗ್ ಅಭಿನಯದ “ಆ್ಯಕ್ಸಿಡೆಂಟ್’ ಶೀರ್ಷಿಕೆಯನ್ನು ರಮೇಶ್ ಅರವಿಂದ್ ನಟಿಸಿದ ಚಿತ್ರಕ್ಕೂ ಇಡಲಾಯಿತು. ನಿರೀಕ್ಷೆ ಇತ್ತಾದರೂ, ಅದು ದೊಡ್ಡ “ಅಪಘಾತ’ಕ್ಕೀಡಾಯಿತು. ವಿಜಯ್ ರಾಘವೇಂದ್ರ, ಶ್ರೀ ಮುರಳಿ ಸಹೋದರರ ಅಭಿನಯದಲ್ಲಿ ಬಂದ “ಮಿಂಚಿನ ಓಟ’ ಕೂಡ ವೇಗ ಮಿತಿ ಉಳಿಸಿಕೊಳ್ಳಲಿಲ್ಲ. ರವಿಚಂದ್ರನ್ ಅಭಿನಯದ “ಸಿಪಾಯಿ’ ಈಗಲೂ ಫೇವರೇಟ್. ಅದೇ ಶೀರ್ಷಿಕೆಯಡಿ ಮಹೇಶ್ ಸಿದ್ಧಾರ್ಥ ಎಂಬ ಹೊಸ ನಟ ಚಿತ್ರ ಮಾಡಿದರೂ, ಆ “ಸಿಪಾಯಿ’ಯನ್ನು ಯಾರೂ ಪ್ರೀತಿಸಲಿಲ್ಲ. ನೀನಾಸಂ ಸತೀಶ್ “ಅಂಜದ ಗಂಡು’ ಹೆಸರಿಟ್ಟು ಚಿತ್ರ ಮಾಡಿದರು. ಹೆಸರಷ್ಟೇ ಸುದ್ದಿಯಾಯ್ತು ವಿನಃ, ಚಿತ್ರಮಂದಿರದಲ್ಲಿ ಆ ಚಿತ್ರ ಸದ್ದು ಮಾಡಲಿಲ್ಲ. “ಟೈಗರ್’ ಮೂಲಕ ಪ್ರಭಾಕರ್ ಟೈಗರ್ ಪ್ರಭಾಕರ್ ಎನಿಸಿಕೊಂಡರು ಅದೇ ಶೀರ್ಷಿಕೆಯಡಿ ಪ್ರದೀಪ್ “ಟೈಗರ್’ ಚಿತ್ರ ಮಾಡಿ ಸೋಲುಂಡರು.
ರಾಘವೇಂದ್ರ ರಾಜ್‌ಕುಮಾರ್, ಮಾಲಾಶ್ರೀ ಅಭಿನಯದಲ್ಲಿ ಬಂದ “ನಂಜುಂಡಿ ಕಲ್ಯಾಣ’ ದೊಡ್ಡ ಯಶಸ್ಸು ಪಡೆದಿತ್ತು. ಅದೇ “ನಂಜುಂಡಿ ಕಲ್ಯಾಣ’ ಎಂಬ ಶೀರ್ಷಿಕೆ ಇಟ್ಟುಕೊಂಡ ಚಿತ್ರದಲ್ಲಿ ಯುವ ನಟ ತನುಷ್ ಹಾಗೂ ಶ್ರಾವ್ಯಾ ಅಭಿನಯಿಸಿದ್ದಾರೆ. ನಂಜುಂಡಿಯ ಮೋಡಿ ಗೊತ್ತಾಗಬೇಕಿದೆ. “ಭೂತಯ್ಯನ ಮಗ ಅಯ್ಯು’ ಚಿತ್ರದ ಶೀರ್ಷಿಕೆಗೆ ಹತ್ತಿರ ಎಂಬಂತೆ, “ಭೂತಯ್ಯನ ಮೊಮ್ಮಗ ಅಯ್ಯು’ವಾಗಿ ಬರುತ್ತಿದೆ. ಆದರೂ, ಆ ಕಥೆಗೂ ಈ ಕಥೆಗೂ ಸಂಬಂಧವಿಲ್ಲ. ಅಂದು “ಶಂಖನಾದ’ ಬಂದಿತ್ತು, ಇಂದು ಹೊಸಬರ “ಶಂಖನಾದ’ ಶುರುವಾಗಿದೆ. ಕಾಶೀನಾಥ್ ಅವರ ಯಶಸ್ವಿ “ಅನುಭವ’ ಶೀರ್ಷಿಕೆಗೆ ಈಗ “ಹೊಸ ಅನುಭವ’ ಎಂಬ ಹೆಸರಲ್ಲಿ ಒಂದು ಚಿತ್ರ ತಯಾರಾಗಿದೆ. ಅಂತೆಯೇ “ಆಪ್ತಮಿತ್ರರು’ ಎಂಬ ಹೊಸಬರ ಚಿತ್ರ ರೆಡಿಯಾಗುತ್ತಿದೆ. “ಎಡಕಲ್ಲು ಗುಡ್ಡದ ಮೇಲೆ’ ಎಂಬ ಮತ್ತೂಂದು ಹೊಸಬರ ತಂಡ ಕೂಡ ಮತ್ತದೇ ಹಳೆಯ ಶೀರ್ಷಿಕೆ ಇಟ್ಟು ಚಿತ್ರೀಕರಣ ಮಾಡುತ್ತಿದೆ.
ಹಳೇ ಚಿತ್ರಗಳ ಶೀರ್ಷಿಕೆ ಮರು ಬಳಕೆಯಾಗಿರುವುದಷ್ಟೇ ಅಲ್ಲ, ಹಲವು ಚಿತ್ರಗಳ ಶೀರ್ಷಿಕೆಗಳ ಮುಂದುವರೆದ ಭಾಗವೆಂಬಂತೆ ಬಿತ್ತರಿಸಿರುವುದುಂಟು. ಆದರೆ, ಆ “ಭಾಗ-2′ ಶೀರ್ಷಿಕೆವುಳ್ಳ ಚಿತ್ರಕ್ಕೂ ಮೊದಲ ಚಿತ್ರಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅಲ್ಲಿ ಸಂಬಂಧ ಇರೋದು, ಕೇವಲ ಹಳೆಯ ಶೀರ್ಷಿಕೆಯಷ್ಟೇ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಬಹುತೇಕ ಹೊಸಬರೇ ಹಳೆಯ ಚಿತ್ರಗಳ ಶೀರ್ಷಿಕೆಯನ್ನು ಮರುಬಳಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಕ್ಸಸ್ ಸಿನಿಮಾದ ಶೀರ್ಷಿಕೆ ಮರುಬಳಕೆ ಮಾಡಿದ ಚಿತ್ರಗಳಿಗೂ ಆ ಮೂಲ ಶೀರ್ಷಿಕೆವುಳ್ಳ ಚಿತ್ರಕ್ಕೂ ಸಂಬಂಧವಿದೆಯಾ? ಖಂಡಿತ ಇಲ್ಲ. ಖಂಡಿತಾ ಇಲ್ಲ. ದರ್ಶನ್ “ಕರಿಯ’ ಮಾಡಿದ್ದರು. ಸಂತೋಷ್, “ಕರಿಯ 2′ ಚಿತ್ರ ಮಾಡಿದರು. ಇಲ್ಲಿ ಹೆಸರೊಂದೇ ರಿಪೀಟ್. ರೌಡಿಸಂ ಕಥೆ ಬಿಟ್ಟರೆ ಬೇರೇನೂ ಇಲ್ಲ. ವಿಷ್ಣುವರ್ಧನ್ ಅಭಿನಯದ “ನಿಶ್ಯಬ್ಧ’ಕ್ಕೂ ಮೊನ್ನೆ ತೆರೆಕಂಡ ಹೊಸಬರ “ನಿಶ್ಯಬ್ಧ 2’ಗೂ ಸಂಬಂಧವಿಲ್ಲ. ಅದೇ ರೀತಿ, ಅವರದೇ “ಕೋಟಿಗೊಬ್ಬ’ ಅದೆಷ್ಟೋ ವರ್ಷಗಳ ನಂತರ “ಕೋಟಿಗೊಬ್ಬ 2′ ಆಗಿ ಬಂತು. ಹೆಸರು ಅದೇ ಇದ್ದರೂ, ಎರಡೂ ಚಿತ್ರಗಳಿಗೆ ಸಂಬಂಧವಿರಲಿಲ್ಲ. “ಮುಂಗಾರು ಮಳೆ’ ಮತ್ತು “ದುನಿಯಾ’ ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರಗಳೆಂದರೆ ತಪ್ಪಿಲ್ಲ. ಅದೇ ಶೀರ್ಷಿಕೆ ಮುಂದುವರೆಸಿ, “ಮುಂಗಾರು ಮಳೆ 2′, “ದುನಿಯಾ 2′ ಚಿತ್ರ ಶುರುವಾದವು. ಈ ಪೈಕಿ “ದುನಿಯಾ 2′ ಬರಬೇಕಿದೆ. “ಕೆಂಪೇಗೌಡ’ ಈಗ ಕೋಮಲ್ ಅಭಿನಯದಲ್ಲಿ “ಕೆಂಪೇಗೌಡ 2′ ಆಗಿ ಬರಲು ಸಜ್ಜಾಗುತ್ತಿದೆ. “ಕೌರವ’, “ಒನ್ಸ್ ಮೋರ್ ಕೌರವ’ನಾಗಿ ಬಂದರೂ ಅಬ್ಬರಿಸಲಿಲ್ಲ. ಶಿವರಾಜಕುಮಾರ್ ಅಭಿನಯದ “ಸಂಯುಕ್ತ’ ಬಗ್ಗೆ ಎಲ್ಲರಿಗೂ ಗೊತ್ತು. ಸೂಪರ್‌ಹಿಟ್ ಚಿತ್ರದ ಶೀರ್ಷಿಕೆ ಮುಂದೆ “ಭಾಗ 2′ ಅಂತಿಟ್ಟುಕೊಂಡು ಹೊಸಬರು ಚಿತ್ರ ಮಾಡಿದ್ದಾರೆ. ಚಿತ್ರ ಈ ವಾರವಷ್ಟೇ ತೆರೆಕಾಣುತ್ತಿರುವುದರಿಂದ ಇದರ ಪ್ಲಸ್ಸು, ಮೈನಸ್ಸು ಬಾಕಿ ಇದೆ.
ಇಷ್ಟಕ್ಕೂ ಹಳೇ ಶೀರ್ಷಿಕೆ ಮರುಬಳಕೆಯಾಗಿದ್ದು, ಮುಂದುವರೆದ ಭಾಗ ಅಂತ ಇಟ್ಟುಕೊಂಡು ಬರುತ್ತಿರುವುದಕ್ಕೆ ಹಳೆಯ ಯಶಸ್ಸಿನ ಚಿತ್ರಗಳ ಮಹಿಮೆ ಕಾರಣ. ಸಿನಿಮಾಗಳ ಕಥೆ ಬೇರೆ, ಅವುಗಳ ಯೋಚನೆ, ಯೋಜನೆ ಬೇರೆ ರೀತಿಯಾಗಿದ್ದರೂ, ಶೀರ್ಷಿಕೆ ಮಾತ್ರ ಹಾಗೊಮ್ಮೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುವುದಂತೂ ಹೌದು. ಇಲ್ಲಿ ಹಳೆಯ ಶೀರ್ಷಿಕೆ ಇಟ್ಟುಕೊಂಡಿದ್ದಷ್ಟೇ ಲಾಭ!
– ವಿಜಯ್ ಭರಮಸಾಗರ