ಕಾಸರಗೋಡು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್‌ನಲ್ಲೂ ಯುಡಿಎಫ್‌ನಲ್ಲೂ ಹೊಸ ಚೈತನ್ಯ ಮೂಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಸಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ಎ. 12ರಂದು ಕೇರಳಕ್ಕೆ ಆಗಮಿಸಲಿದ್ದಾರೆ.
ತಿರುವನಂತಪುರ, ಕಲ್ಲಿಕೋಟೆಯಲ್ಲಿ ರ್ಯಾಲಿಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದರೂ, ಅಂತಿಮ ತೀರ್ಮಾನವಾಗಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರೂ ಕೇರಳಕ್ಕೆ ತಲುಪಲಿದ್ದಾರೆ.
ತೃಶ್ಶೂರು, ವಯನಾಡು ಹೊರತುಪಡಿಸಿ ಎನ್‌ಡಿಎ ಪ್ರಚಾರ ಮೂರನೇ ಸುತ್ತು ಸಾಗಿದೆ. “ವಿಶ್ವಾಸ ಸಂರಕ್ಷಣೆ, ಅಭಿವೃದ್ಧಿಗಾಗಿ ಕೇರಳ ಮೋದಿ ಜತೆಗೆ’ ಎಂಬ ಸಂದೇಶದೊಂದಿಗೆ ಎನ್‌ಡಿಎ ಪ್ರಚಾರ ಆಯುಧವನ್ನಾಗಿ ಬಳಸಿಕೊಂಡಿದೆ.
ಅಮೇಠಿಯಲ್ಲಿ ಪರಾಭವ ಭೀತಿ ಯಿಂದ ರಾಹುಲ್ ಗಾಂಧಿಯನ್ನು ಕೇರಳದಿಂದ ಸ್ಪರ್ಧಿಸಲಾಗುತ್ತಿದೆ ಎಂದು ಜನರಿಗೆ ಮನದಟ್ಟು ಮಾಡಲು ಬಿಜೆಪಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಪ್ರಚಾರ ಮಾಡಲಿದೆ. ಅಮೇಠಿಯ ಮತದಾರರನ್ನು ರಾಹುಲ್ ಗಾಂಧಿ ವಂಚಿಸಿದ್ದಾರೆಂದು ಅವರ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಸ್ಮೃತಿ ಇರಾನಿ ಹೇಳಿದ್ದಾರೆ. ಪ್ರಚಾರದಲ್ಲಿ ಎನ್‌ಡಿಎ ಇತರ ಒಕ್ಕೂಟದೊಂದಿಗೆ ಮುನ್ನಡೆ ಸಾಧಿಸಲು ಯತ್ನಿಸುತ್ತಿದೆ. ತಿರುವನಂತಪುರದಲ್ಲಿ ಕುಮ್ಮನಂ ರಾಜಶೇಖರನ್ ಮೊದಲೇ ಪ್ರಚಾರದಲ್ಲಿ ತೊಡಗಿದ್ದರಿಂದ ಇತರೆಡೆಗಳಿಗಿಂತ ಎನ್‌ಡಿಎ ಪ್ರಚಾರದಲ್ಲಿ ಮುನ್ನಡೆ ಸಾಧಿಸಿದೆ. ಕುಮ್ಮನಂ ನಾಲ್ಕನೇ ಹಂತದ ಪ್ರಚಾರದಲ್ಲಿ ತೊಡಗಿದ್ದಾರೆ.
ಪ್ರಚಾರ ವಿಳಂಬ
ವಯನಾಡಿನಲ್ಲಿ ರಾಹುಲ್ ಗಾಂಧಿ ಅಭ್ಯರ್ಥಿ ಎಂಬ ಘೋಷಣೆಗೆ ವಿಳಂಬ ವಾದುದರಿಂದ ಎನ್‌ಡಿಎ ಅಭ್ಯರ್ಥಿಯ ಘೋಷಣೆ ವಿಳಂಬವಾಗಿತ್ತು. ಇದರಿಂದಾಗಿ ವಯನಾಡು ಹಾಗೂ ತೃಶ್ಶೂರಿನಲ್ಲಿ ಎನ್‌ಡಿಎ ಪ್ರಚಾರ ವಿಳಂಬವಾಯಿತು.
ಕೊನೆಯ ಹಂತದಲ್ಲಿ ತೃಶ್ಶೂರಿನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಚಿತ್ರನಟ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸಿದೆ. ಸುರೇಶ್ ಗೋಪಿ ಸುಪರಿಚಿತವಾಗಿರುವುದರಿಂದ ಬಿಜೆಪಿಗೆ ಆಶ್ವಾಸನೆಯಾಗಿದೆ.