ಪುತ್ತೂರು: ಹನ್ನೆರಡು ದಿನಗಳ ಹಿಂದೆ ಕೇರಳದ ಪರಪ್ಪೆ ಅಭಯಾರಣ್ಯದಿಂದ ಆನೆಗುಂಡಿ ರಕ್ಷಿತಾರಣ್ಯದ ಮೂಲಕ ಕೊಳ್ತಿಗೆ ಗ್ರಾಮದ ಕಲಾಯಿ ಕೆಎಫ್‌ಡಿಸಿ ರಬ್ಬರ್ ತೋಟಕ್ಕೆ ಪ್ರವೇಶಿಸಿ ಅಲ್ಲಿಂದ ಪುತ್ತೂರು, ಕಡಬ, ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಿಗೆ ಲಗ್ಗೆ ಇಟ್ಟಿದ್ದ ಎರಡು ಕಾಡಾನೆಗಳನ್ನು ಮರಳಿ ಪರಪ್ಪೆ ರಕ್ಷಿತಾರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶ ಕಂಡಿದೆ.
ಕೊಳ್ತಿಗೆ ಗ್ರಾಮದ ರಬ್ಬರ್ ತೋಟದಲ್ಲಿ ಗದ್ದಲ ಎಬ್ಬಿಸಿದ ಕಾಡಾನೆ ಅನಂತರ ವಿವಿಧ ಗ್ರಾಮಗಳ ಮೂಲಕ ಬೆಳ್ಳಿಪ್ಪಾಡಿಗೆ ಬಂದಿತ್ತು. ಒಂಟಿ ಆನೆ ಎಂದೇ ಭಾವಿಸಲಾಗಿತ್ತಾದರೂ ಬೆಳ್ಳಿಪ್ಪಾಡಿಯಲ್ಲಿ ಎರಡು ಆನೆಗಳು ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಯಾಗಿತ್ತು. ಕೆಲವು ತೋಟಗಳಲ್ಲಿಯು ಆನೆಗಳು ಕೃಷಿ ಹಾನಿ ಉಂಟು ಮಾಡಿದ್ದವು.
30 ಸಿಬಂದಿ ಕಾರ್ಯಾಚರಣೆ: ಅರಣ್ಯ ಇಲಾಖೆಯ ಸುಮಾರು 30 ಸಿಬಂದಿ ಕಳೆದ ಹತ್ತು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದು ಕಾಡಾನೆಗಳು ಬಂದ ದಾರಿಯಲ್ಲೇ ನಿರ್ಗಮಿಸಿವೆ. ಬೆಳ್ಳಿಪ್ಪಾಡಿಯಿಂದ ಬೆದ್ರಾಳ, ಪಂಜಿಗ, ವೀರಮಂಗಲ ಮೂಲಕ ಗುರುವಾರ ರಾತ್ರಿ ಸೊರಕೆ ಗ್ರಾಮ ಪ್ರವೇಶಿಸಿತ್ತು. ಶುಕ್ರವಾರ ರಾತ್ರಿ ಗೌರಿ ಹೊಳೆ ಮೂಲಕ ಪುಣcಪ್ಪಾಡಿ, ಪಾಲ್ತಾಡಿ ಗ್ರಾಮಕ್ಕೆ ತಲುಪಿದ ಆನೆಗಳು ಶನಿವಾರ ಕೊಳ್ತಿಗೆ ಗ್ರಾಮದ ಕಲಾಯಿ ಮೂಲಕ ರಬ್ಬರ್ ತೋಟ ಪ್ರವೇಶಿಸಿ ಅಲ್ಲಿಂದ ಆನೆಗುಂಡಿ ರಕ್ಷಿತಾರಣ್ಯದತ್ತ ಹೆಜ್ಜೆ ಹಾಕಿದೆ. ಕಲಾಯಿಯಲ್ಲಿ ಕೆಲ ಕೃಷ್ಟಿ ತೋಟಕ್ಕೆ ಸಣ್ಣ ಪ್ರಮಾಣದ ಹಾನಿ ಉಂಟು ಮಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜೋಡಿ ಆನೆಗಳು ವೀಡಿಯೋದಲ್ಲಿ ಸೆರೆ: ಪುತ್ತೂರು ತಾಲೂಕಿನ ಸೊರಕೆ ಪರಿಸರದಲ್ಲಿ ಜೋಡಿ ಕಾಡಾನೆ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸಾರ್ವಕನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಅಂಕತ್ತಡ್ಕ ಅಂಗನವಾಡಿ ಬಳಿ ರಸ್ತೆಯಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ತಿಂಗಳಾಡಿಯಿಂದ ತೆಗ್ಗು, ಓಲೆಮುಂಡೋವು ಕಡೆ ಪ್ರಯಾಣಿಸುವವರು ಎಚ್ಚರಿಕೆಯಿಂದಿರುವಂತೆ ಸ್ಥಳೀಯರೊಬ್ಬರು ವಿಡಿಯೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದರು. ಹೀಗಾಗಿ ಆನೆಗಳು ಮತ್ತೆ ನಾಡಿಗೆ ನುಗ್ಗಿತ್ತೆ ಎಂಬ ಆತಂಕ ಮೂಡಿತ್ತು. ಆದರೆ ಶನಿವಾರ ಬೆಳಗ್ಗೆ ಕಣಿಯಾರು ಮಲೆ ರಬ್ಬರ್ ಪ್ಲಾಂಟೇಷನ್ ಕಡೆಗೆ ಆನೆ ತೆರಳಿರುವ ಮಾಹಿತಿ ಖಚಿತಪಟ್ಟ ಹಿನ್ನೆಲೆಯಲ್ಲಿ ಆತಂಕ ದೂರವಾಯಿತು.
ಎರಡು ಗಂಡಾನೆಗಳು: ಎರಡು ಕಾಡಾನೆಗಳು ಗಂಡಾನೆಗಳು ಎನ್ನುವುದನ್ನು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಒಂದು ಸಣ್ಣ ಮರಿಯಾನೆ ಆಗಿದ್ದು ಇನ್ನೊಂದು ದೊಡ್ಡ ಆನೆ. ಹನ್ನೆರಡು ದಿನಗಳ ಹಿಂದೆ ಅವೆರೆಡು ಕೊಳ್ತಿಗೆ ಅರಣ್ಯ ಭಾಗಕ್ಕೆ ನುಸುಳಿದ್ದು ಅಲ್ಲಿಂದ ಆಹಾರಕ್ಕಾಗಿ ಬೇರೆ ಬೇರೆ ಪ್ರದೇಶಗಳಿಗೆ ಲಗ್ಗೆ ಇಟ್ಟಿದೆ. ಅಲ್ಲೆಲ್ಲಾ ಕೆಲ ದಿನಗಳ ಕಾಲ ತಂಗುವ ಸಾಧ್ಯತೆ ಇದ್ದರೂ ಅಸುರಕ್ಷಿತ ವಾತಾವರಣ ಕಂಡು ಬಂದ ಕಾರಣ ಮತ್ತೆ ಬಂದ ದಾರಿಯಲ್ಲೇ ಹಿಂದಿರುಗಿದೆ ಎಂದು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಉದಯವಾಣಿಗೆ ತಿಳಿಸಿದ್ದಾರೆ.