Advertisement

ಲಾಕ್‌ಡೌನ್‌ ಅವಧಿಯಲ್ಲಿ ಪುಸ್ತಕ ಸಂಪಾದಿಸಿದ 9ನೇ ತರಗತಿ ವಿದ್ಯಾರ್ಥಿನಿ

08:37 AM Jun 18, 2020 | mahesh |

ಹಾವೇರಿ: ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿದ್ದವರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಸಮಯಸದುಪಯೋಗ ಪಡಿಸಿಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ಬಾಲಕಿ ಈ ಸಮಯದಲ್ಲಿ ಪುಸ್ತಕ ಬರೆದು ತನ್ನ ಸಾಹಿತ್ಯ ಪ್ರೀತಿ ಮೆರೆದಿದ್ದಾಳೆ. ನಗರದ ಎಸ್‌.ಎಂ.ಎಸ್‌.
ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನೇಹಾ ಗುಡ್ಡಪ್ಪ ಓಂಕಾರಣ್ಣನವರ ಲಾಕ್‌ಡೌನ್‌ ಸಮಯದಲ್ಲಿ ಅನೇಕ ಸಾಹಿತಿಗಳು ಬರೆದ ಪುಸ್ತಕಗಳನ್ನು ಓದಿ ವಿಷಯ ಸಂಗ್ರಹಿಸಿಕೊಂಡು “ಜ್ಞಾನ ವಿಕಾಸ’ ಪುಸ್ತಕ ಸಂಪಾದನೆ ಮಾಡಿ ಗಮನಸೆಳೆದಿದ್ದಾಳೆ.

Advertisement

ಈಕೆ ತಾನು ಸಂಪಾದಿಸಿದ ಪುಸ್ತಕವನ್ನುಶಿಕ್ಷಣ ಸಚಿವರು ಇದ್ದಲ್ಲಿಂದಲೇ ಬಿಡುಗಡೆಗೊಳಿಸಬೇಕು ಎಂದು ಇಚ್ಛಿಸಿ ಪುಸ್ತಕದ ಪಾರ್ಸಲ್‌ನ್ನು ಶಿಕ್ಷಣ ಸಚಿವ ಸುರೇಶಕುಮಾರ್‌ ಅವರಿಗೆ ಕಳುಹಿಸಿದ್ದಳು. ಬಾಲಕಿಯ ಇಚ್ಛೆಯಂತೆ ಸಚಿವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪುಸ್ತಕದ ಪಾರ್ಸೆಲ್‌ ತೆರೆವುಗೊಳಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿದ್ದು, ಸಚಿವರು ಬಾಲಕಿಯ ಸಾಹಿತ್ಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಸಹ ಕಳುಹಿಸಿದ್ದಾರೆ.

ಸಚಿವರ ಪತ್ರ: “ಪ್ರಿಯ ವಿದ್ಯಾರ್ಥಿನಿ ನೇಹಾಳಿಗೆ ಶುಭ ಹಾರೈಕೆಗಳು. ನೀನು ಪ್ರೀತಿಯಿಂದ ಕಳುಹಿಸಿದ “ಜ್ಞಾನದ ವಿಕಾಸ’ ಪುಸ್ತಕ ತಲುಪಿತು. ಇನ್ನೂ ಚಿಕ್ಕ ವಯಸ್ಸಿನಲ್ಲೇ ಅಗಾಧ ಪ್ರತಿಭೆ ನಿನ್ನದಾಗಿದೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ. ದಿನಾಚರಣೆಗಳು, ಚುಟುಕುಗಳು, ಗಾದೆಗಳು, ಮಕ್ಕಳ ಕಥೆಗಳು, ಒಗಟುಗಳು ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ “ಜ್ಞಾನದ ವಿಕಾಸ’ ಪುಸ್ತಕ ತುಂಬ ಚೆನ್ನಾಗಿ ಮೂಡಿ ಬಂದಿದ್ದು ಮಕ್ಕಳ ಜ್ಞಾನದ ವಿಕಾಸಕ್ಕೆ ನಿಜಕ್ಕೂ ಜ್ಞಾನವನ್ನು ಧಾರೆಯರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೆ ನಿನ್ನ ಒಂದು ಕಥಾಸಂಕಲನ “ಗುಂಡಿಯಲ್ಲಿ ಸಿಕ್ಕ ಗುಂಡಣ್ಣ’ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಇನ್ನೊಂದು ಪುಸ್ತಕ ಹೊರ ಬಂದಿರುವುದು ನಿನ್ನ ಸಾಹಿತ್ಯಾಸಕ್ತಿಯನ್ನು ಪರಿಚಯಿಸಿದೆ. ವಿಶೇಷವಾಗಿ ಪುಸ್ತಕವನ್ನು ನನಗೆ
ಅರ್ಪಿಸಿರುವುದಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಈ ಪುಸ್ತಕದ ಪಾರ್ಸಲ್‌ ಒಡೆಯುವ ನಾನು ಇರುವಲ್ಲಿಂದಲೇ ಬಿಡುಗಡೆಗೊಳಿಸಬೇಕೆಂದು ಮಾಡಿರುವ ನಿನ್ನ ಮನವಿಗೆ ಮೂಕವಿಸ್ಮಿತನಾದ ನಾನು, ಅತ್ಯಂತ ಖುಷಿಯಿಂದ “ಜ್ಞಾನದ ವಿಕಾಸ’ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ನಿನ್ನ ಈ ಸಾಹಿತ್ಯ ಕೃಷಿಗೆ ಪ್ರೊತ್ಸಾಹ ನೀಡಿದ ನಿನ್ನ ಅಪ್ಪ, ಅಮ್ಮ ಸೇರಿದಂತೆ ಎಲ್ಲರಿಗೂ ನನ್ನ ಕೃತಜ್ಞತೆಗಳು.’ ಎಂದು ಸಚಿವರು ಬಾಲಕಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next