Advertisement

ಬೀದರ್ ನಲ್ಲಿ ಕೋವಿಡ್ 19 ಸೋಂಕಿಗೆ 9ನೇ ಬಲಿ ; 9 ಹೊಸ ಪಾಸಿಟಿವ್ ಪ್ರಕರಣ ವರದಿ

10:37 PM Jun 18, 2020 | Hari Prasad |

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಕೋವಿಡ್ 19 ಸೋಂಕಿನ ಅಟ್ಟಹಾಸ ಮುಂದುವರೆದಿದೆ.

Advertisement

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಕೋವಿಡ್ 19 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಿದ್ದಾರೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ಗುರುವಾರ ಮತ್ತೆ 9 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈವರೆಗೆ ಮೃತರ ಸಂಖ್ಯೆ 9ಕ್ಕೆ ಏರಿಕೆ ಆಗಿದ್ದು, ಸೋಂಕಿತರ ಸಂಖ್ಯೆ 401ಕ್ಕೆ ತಲುಪಿದೆ.

ಮಂಗಳವಾರದಿಂದ ಸತತ ಮೂರು ದಿನ ಕೋವಿಡ್ ಮರಣ ಮೃದಂಗ ಬಾರಿಸಿರುವುದು ಜಿಲ್ಲೆಯಲ್ಲಿ ಮಹಾಮಾರಿಯ ಆತಂಕ ಹೆಚ್ಚುವಂತೆ ಮಾಡಿದೆ.

ಗುರುವಾರ ಚಿಟಗುಪ್ಪ ಪಟ್ಟಣದ ಕಂಟೈನ್ಮೆಂಟ್ ಝೋನ್ ನಿವಾಸಿಯಾಗಿರುವ 55 ವರ್ಷದ ವ್ಯಕ್ತಿ (ಪಿ-7776) ಬುಧವಾರ ಮೃತಪಟ್ಟಿದ್ದರು, ಗುರುವಾರ ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.

Advertisement

ಈ ವ್ಯಕ್ತಿ ತೀವ್ರ ಜ್ವರ ಮತ್ತು ಶ್ವಾಸಕೋಶದಲ್ಲಿ ತೊಂದರೆ ಹಿನ್ನಲೆ ಜೂ. 8ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಟಗುಪ್ಪ ಪಟ್ಟಣದಲ್ಲೇ ಕೋವಿಡ್ 19 ಸೋಂಕು ಸಂಬಂಧಿಸಿ ನಾಲ್ಕನೇ ಸಾವು ಸಂಭವಿಸಿದಂತಾಗಿದೆ.

ಗುರುವಾರ ಪತ್ತೆಯಾಗಿರುವ ಸೋಂಕಿತರೆಲ್ಲರೂ ಭಾಲ್ಕಿ ತಾಲೂಕಿನವರಾಗಿದ್ದಾರೆ. ತಾಲೂಕಿನ ಶಿವಣಿ ಗ್ರಾಮದಲ್ಲಿ 2 ಪ್ರಕರಣ, ರುದನೂರ, ಕಾಕನಾಳ್ ಮತ್ತು ಲಖನಗಾಂವ್ ಗ್ರಾಮದಲ್ಲಿ ತಲಾ ಒಂದು ಕೇಸ್ ಸೇರಿ ಒಟ್ಟು 5 ಪ್ರಕರಣಗಳು ವರದಿಯಾಗಿವೆ. 60 ವರ್ಷದ ಪುರುಷ ಪಿ-7772, 69 ವರ್ಷದ ಪುರುಷ ಪಿ-7773, 19 ವರ್ಷದ ಯುವತಿ ಪಿ-7774 ಮತ್ತು 18 ವರ್ಷದ ಯುವತಿ ಪಿ-7775ಗೆ ಮಹಾರಾಷ್ಟ್ರ ಸಂಪರ್ಕ ಮತ್ತು 21 ವರ್ಷದ ಯುವತಿ ಪಿ-7771 ರೋಗಿಗೆ ಪಿ-4369 ಸಂಖ್ಯೆ ರೋಗಿಯಿಂದ ಈ ಸೋಂಕು ಹರಡಿರುವ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಇದೀಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 401 ಆದಂತಾಗಿದೆ. ಗುರುವಾರ 12 ಜನ ಸೇರಿ ಒಟ್ಟು 251 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇನ್ನೂ 141 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ತನ್ನ ದೈನಂದಿನ ಮಾಹಿತಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next