ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 6.30 ಲಕ್ಷ ದಾಟಿದ್ದು, ಇದರಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.
ಶನಿವಾರ ಒಟ್ಟು 48,408 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 9,886 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜತೆಗೆ 8,989 ಮಂದಿ ಗುಣಮುಖರಾಗಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ.
ಪ್ರಸ್ತುತ 1,12,783 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 841 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 3952, ಮೈಸೂರಿನಲ್ಲಿ 1514, ಹಾಸನದಲ್ಲಿ 460, ಶಿವಮೊಗ್ಗದಲ್ಲಿ 337 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಸೋಂಕಿತ ಒಂದೇ ದಿನದಲ್ಲಿ ಪತ್ತೆಯಾಗಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ 2001, ಮೈಸೂರಿನಲ್ಲಿ 859, ತುಮಕೂರಿನಲ್ಲಿ 963, ಶಿವಮೊಗ್ಗದಲ್ಲಿ 866 ಸೇರಿದಂತೆ ರಾಜ್ಯದಲ್ಲಿ 8989 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ 21, ಮೈಸೂರಿನಲ್ಲಿ 18, ದಕ್ಷಿಣ ಕನ್ನಡದಲ್ಲಿ 9, ಹಾಸನ ಹಾಗೂ ತುಮಕೂರಿನಲ್ಲಿ ತಲಾ 6 ಸೇರಿದಂತೆ 100 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದ 612 ಜ್ವರ ಚಿಕಿತ್ಸಾಲಯದಲ್ಲಿ 4610 ವ್ಯಕ್ತಿಗೆ, ಬಿಬಿಎಂಪಿ ವ್ಯಾಪ್ತಿಯ 150 ಜ್ವರ ಚಿಕಿತ್ಸಾಲಯದಲ್ಲಿ 3914 ಮಂದಿ ಹಾಗೂ 69 ಖಾಸಗಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿ 211 ವ್ಯಕ್ತಿಯ ತಪಾಸಣೆ ಮಾಡಲಾಗಿದೆ. 1703 ಮಂದಿಗೆ ಆಪ್ತ ಸಮಾಲೋಚನೆಯ ಸೇವೆಯನ್ನು ಮಾನಸಿಕ ಆರೋಗ್ಯ ವಿಭಾಗದಿಂದ ನೀಡಲಾಗಿದೆ. 1,96,212 ವ್ಯಕ್ತಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.