Advertisement

ಹಾಲಿ ವ್ಯಾಪಾರಸ್ಥರಿಗೆ 98 ಮಳಿಗೆಗಳ ವ್ಯವಸ್ಥೆ

12:35 PM Jun 02, 2019 | Team Udayavani |

ವಿಶೇಷ ವರದಿ-ಮಹಾನಗರ: ಎರಡು ದಶಕಗಳಿಂದ ಗುಹೆ ರೀತಿಯಲ್ಲಿದ್ದ ಅತ್ಯಂತ ಹಳೆಯ ಕಂಕನಾಡಿ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲೇ 41.50 ಕೋ.ರೂ. ವೆಚ್ಚದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣವಾಗಲಿದೆ. ಇನ್ನೆರಡು ತಿಂಗಳುಗಳಲ್ಲಿ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡು ಕಾಮಗಾರಿ ಆರಂಭವಾಗಲಿದೆ.

Advertisement

ಹೊಸ ಮಾರುಕಟ್ಟೆ ನಿರ್ಮಾಣವಾಗುವವರೆಗೂ ಪ್ರಸ್ತುತ ಮಾರಾಟದಲ್ಲಿ ತೊಡಗಿರುವವರಿಗೆ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಕಂಕನಾಡಿ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಸದ್ಯ ನಡೆಯುತ್ತಿದೆ.

ಪ್ರಸ್ತುತ ಹೂವಿನ ಮಾರ್ಕೆಟ್ ಇರುವ ಜಾಗದಲ್ಲಿ ಮೊದಲು ಕಂಕನಾಡಿ ಮಾರುಕಟ್ಟೆ ಇತ್ತು. ಬಳಿಕ ಅಲ್ಲಿಂದ ಸ್ಥಳಾಂತರಗೊಂಡ ಮಾರುಕಟ್ಟೆ ಈಗಿರುವ ಜಾಗದಲ್ಲಿ 23 ವರ್ಷಗಳಿಂದ ಕಾರ್ಯನಿರತವಾಗಿದೆ.

ಹೊರ ಭಾಗದ ಜನರಿಗೆ ಮೇಲ್ನೋಟಕ್ಕೆ ಇಲ್ಲಿ ಮಾರುಕಟ್ಟೆ ಇರುವುದೇ ಗೊತ್ತಾಗುವುದಿಲ್ಲ. ಕಟ್ಟಡದ ಹೊರಭಾಗದಲ್ಲಿ ಮಾಂಸದಂಗಡಿಗಳಿದ್ದು, ಮಾರ್ಕೆಟ್ ಎಂದರೆ ಇಷ್ಟೇ ಎಂದಷ್ಟೇ ತಿಳಿಯುತ್ತದೆಯೇ ಹೊರತು, ಹಣ್ಣು, ತರಕಾರಿ, ದಿನಸಿ ಸಾಮಗ್ರಿಗಳ ಮಾರಾಟಕ್ಕೆ ಒಳಭಾಗದಲ್ಲಿ ಅಂಗಡಿಗಳಿವೆ ಎಂಬುವುದು ಗೊತ್ತಾಗುವುದೇ ಇಲ್ಲ. ಗುಹೆಯ ರೀತಿಯಲ್ಲೇ ಇಲ್ಲಿನ ಮಾರುಕಟ್ಟೆ ತೋರಿಬರುತ್ತದೆ. ಮಳೆಗೆ ಸೋರುವ ಛಾವಣಿ, ಎದ್ದು ಹೋಗಿರುವ ಹಾಸು ಕಲ್ಲುಗಳು, ಮಳೆ ನೀರು ನಿಂತು ವಾಸನೆ ಹುಟ್ಟಿಸುವ ಪರಿಸರ ಇಲ್ಲಿದೆ. ಸರಿಯಾಗಿ ಗಾಳಿಯಾಡುವ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ವ್ಯಾಪಾರಿಗಳೂ ಆದಾಯವಿಲ್ಲದೆ ಕಂಗಾಲಾಗಿದ್ದಾರೆ.

ಇದೀಗ ಇಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣವಾಗುತ್ತಿರುವುದು ವ್ಯಾಪಾರಿಗಳಿಗೂ ಖುಷಿ ನೀಡಿದೆ ಎನ್ನುತ್ತಾರೆ ಇಲ್ಲಿ ವ್ಯಾಪಾರಿ ಮೋಹನ್‌ದಾಸ್‌.

Advertisement

ಎರಡು ವರ್ಷಗಳ ಹಿಂದೆಯೇ ಇಲ್ಲಿ ಅತ್ಯಾಧುನಿಕ ಮಾರುಕಟ್ಟೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಅನಂತರ ನನೆಗುದಿಗೆ ಬಿದ್ದಿದ್ದ ಪ್ರಸ್ತಾವನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. ಕಂಕನಾಡಿ ಬಸ್‌ ನಿಲ್ದಾಣದ ಬಳಿಯಲ್ಲಿ ತಲಾ 70 ಚದರ ಮೀಟರ್‌ ವಿಸ್ತ್ರೀರ್ಣ ಹೊಂದಿರುವ 98 ಮಳಿಗೆಗಳ ತಾತ್ಕಾಲಿಕ ಮಾರುಕಟ್ಟೆಯನ್ನು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಈ ಕಾಮಗಾರಿ ಅಂತಿಮಗೊಂಡು ವ್ಯಾಪಾರಿಗಳ ಸ್ಥಳಾಂತರ ನಡೆಯಲಿದೆ.

59.63 ಸೆಂಟ್ಸ್‌ನಲ್ಲಿ ಹೊಸ ಮಾರ್ಕೆಟ್ಹೊ
ಸ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣವು 59.63 ಸೆಂಟ್ಸ್‌ ಜಾಗದಲ್ಲಿ 41.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಮಾಲ್ಗಳಂತಹ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗುತ್ತದೆ. ಒಟ್ಟು ಆರು ಮಳಿಗೆಗಳನ್ನು ಮಾರುಕಟ್ಟೆ ಹೊಂದಿದ್ದು, ತಳ ಅಂತಸ್ತು ಮತ್ತು ಮೇಲಿನ ಅಂತಸ್ತಿನಲ್ಲಿ ವಾಹನ ನಿಲುಗಡೆ, ಕೆಳ ಅಂತಸ್ತಿನಲ್ಲಿ ಮಾಂಸಾಹಾರ ಮಳಿಗೆಗಳು, ನೆಲ ಅಂತಸ್ತಿನಲ್ಲಿ ತರಕಾರಿ, ಹಣ್ಣು, ಹೂವಿನ ಅಂಗಡಿ, ಕ್ಯಾಂಟಿನ್‌ ಮತ್ತಿತರ ಅಂಗಡಿಗಳು, 1ನೇ ಮಹಡಿಯಲ್ಲಿ ಅಂಗಡಿ, ಮಳಿಗೆ, ಕಚೇರಿಗಳಿರಲಿವೆ. 2ರಿಂದ ಆರನೇ ಮಹಡಿಯವರೆಗೂ ವಿವಿಧ ಕಚೇರಿಗಳಿಗೆ ವ್ಯವಸ್ಥೆ ಇರುತ್ತದೆ.

ಕದ್ರಿ ತಾತ್ಕಾಲಿಕ ಮಾರುಕಟ್ಟೆ ಸಿದ್ಧ
ಕಂಕನಾಡಿ ಮಾರುಕಟ್ಟೆ ಮಾದರಿಯಲ್ಲೇ ಕದ್ರಿ ಮಾರುಕಟ್ಟೆಯೂ ಹೈಟೆಕ್‌ ಸ್ಪರ್ಶ ಪಡೆಯುತ್ತಿದೆ. ಇಲ್ಲಿ ಮಾರ್ಕೆಟ್ ನಿರ್ಮಾಣಕ್ಕೆ ಹಳೆ ಮಾರ್ಕೆಟ್ ಕೆಡವಿ ಹಾಕುವ ಸಲುವಾಗಿ ವ್ಯಾಪಾರಿಗಳಿಗೆ ಪರ್ಯಾಯವಾಗಿ ರಸ್ತೆ ಬದಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 31 ಮಳಿಗೆ ಹೊಂದಿರುವ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಲಾ ಗಿದ್ದು, ಕಾಮಗಾರಿ ಮುಗಿ ದಿದೆ. ಕೆಲವೇ ದಿನಗಳಲ್ಲಿ ವ್ಯಾಪಾರಿಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದು, ಬಳಿಕ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಒಟ್ಟು 45 ಸೆಂಟ್ಸ್‌ ಜಾಗದಲ್ಲಿ 12. 3 ಕೋ.ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಗೊಳ್ಳಲಿದೆ. ಈ ಮಾರುಕಟ್ಟೆ ತಳ ಅಂತಸ್ತು, ಕೆಳ ಅಂತಸ್ತು, ನಾಲ್ಕು ಮಹಡಿಗಳನ್ನು ಹೊಂದಿರಲಿದೆ.

ವ್ಯವಸ್ಥೆ ಇರಬೇಕು

ಹೊಸ ಮಾರುಕಟ್ಟೆ ನಿರ್ಮಾಣ ಮಾಡಲು ಹಳೆ ಮಾರುಕಟ್ಟೆಯನ್ನು ಕೆಡವಲಾಗುತ್ತದೆ ಎಂದು ಪಾಲಿಕೆಯವರು ಹೇಳಿದ್ದಾರೆ. ಅಲ್ಲಿಗೆ ಹೋಗಲು ತಯಾರಿದ್ದೇವೆ. ಆದರೆ ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆ ಇರಬೇಕು.
– ಬಿ. ಲೋಕನಾಥ್‌ ಶೆಟ್ಟಿ ,

ವ್ಯಾಪಾರಿ

2 ತಿಂಗಳಲ್ಲಿ ಪೂರ್ಣ

ಕಂಕನಾಡಿಯಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಯಬಹುದು. ಬಳಿಕ ಹೊಸ ಮಾರುಕಟ್ಟೆ ನಿರ್ಮಾಣದ ಪ್ರಕ್ರಿಯೆ ನಡೆಯಲಿದೆ.
– ನಾರಾಯಣಪ್ಪ,

ಪ್ರಭಾರ ಆಯಕ್ತರು ಪಾಲಿಕೆ
Advertisement

Udayavani is now on Telegram. Click here to join our channel and stay updated with the latest news.

Next