ಜೈಪುರ: ಗ್ರಾಮದ ತುಂಬೆಲ್ಲಾ ನೀರವ ಮೌನ, ಆಟದ ಮೈದಾನ ಬಿಡಿ ಮನೆಯಂಗಳಲ್ಲೂ ಮಕ್ಕಳ ಆಟವಿಲ್ಲ, ಪಕ್ಕದ ಮನೆಯವರ ಜತೆ ಮಾತುಕತೆಯೂ ಇಲ್ಲ, ಅಂಗಡಿಗಳ ಬಾಗಿಲು ಮುಚ್ಚಿದೆ, ರಸ್ತೆಗಳು ಬಣಗುಟ್ಟುತ್ತುವೆ.. ಅಂದಹಾಗೆ ಈ ದೃಶ್ಯ ಕಂಡುಬಂದಿದ್ದು ರಾಜಸ್ಥಾನದ ಝುಂಝುನು ನ ಸಿಯಾಲೋಕಲಾ ಗ್ರಾಮದಲ್ಲಿ. ಕಾರಣ ಈ ಗ್ರಾಮದಲ್ಲಿ ಒಂದೇ ದಿನ 95 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ರಾಜ್ಯ ಸರ್ಕಾರದ ಬಿಗಿ ನಿಯಮಗಳಿದ್ದರೂ ಉಲ್ಲಂಘಿಸಿ ಆ ಗ್ರಾಮದಲ್ಲಿ ಸಾಲು ಸಾಲು ವಿವಾಹ ಕಾರ್ಯಕ್ರಮಗಳು ನಡೆದಿದ್ದವು. ಜನರೂ ಪಾಲ್ಗೊಂಡಿದ್ದರು. ಇದೀಗ ಈ ವಿವಾಹ ಸಮಾರಂಭಗಳೇ ಗ್ರಾಮದ ಪಾಲಿಗೆ ದುಸ್ವಪ್ನವಾಗಿದೆ.
ಇದನ್ನೂ ಓದಿ:ಲಾಕ್ ಡೌನ್ ನಿಯಮ ಉಲ್ಲಂಘಿಸಿದನೆಂದು ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಒಡೆದು ಹಾಕಿದ ಡಿಸಿ
ಎಪ್ರಿಲ್ 25ರಂದು ಗ್ರಾಮದಲ್ಲಿ ಮೂರು ಮದುವೆ ಕಾರ್ಯಕ್ರಮಗಳು ನಡೆದಿದ್ದವು. ಕೋವಿಡ್ 19 ಎಂಬ ಸೋಂಕು ಇದೆ ಎಂದು ನಾವುಗಳು ಯಾರೂ ನಂಬಿರಲಿಲ್ಲ. ಕೋವಿಡ್ ಪರೀಕ್ಷೆ ನಡೆಸದ ಬಳಿಕವೂ ನಾವು ಆರಾಮವಾಗಿ ಊರೆಲ್ಲ ಸುತ್ತುತ್ತಿದ್ದೆವು. ಆದರೆ ಫಲಿತಾಂಶ ಬಂದಾಗ 95 ಜನರಿಗೆ ಪಾಸಿಟಿವ್ ಆಗಿದೆ. ಜನರ್ಯಾರೂ ಮನೆಯಿಂದ ಹೊರಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಂದ್ರ ಶೇಖಾವತ್.
ಎಪ್ರಿಲ್ 25ರಂದು ಗ್ರಾಮದಲ್ಲಿ ಮೂರು ವಿವಾಹ ಸಮಾರಂಭಗಳು ನಡೆದಿದ್ದವು, ಇದಾದ ಬಳಿಕ ಸೋಂಕು ಪ್ರಸರಣವಾಗಿದೆ. ಮದುಮಗಳ ತಂದೆ ಕೋವಿಡ್ ಗೆ ಬಲಿಯಾಗಿದ್ದಾರೆ. ಇವರ ಅಂತ್ಯಸಂಸ್ಕಾರದಲ್ಲೂ ಜನರು ಭಾಗಿಯಾಗಿದ್ದರು.
ಈ ಗ್ರಾಮಕ್ಕೀಗ ಯಾರೂ ಬರುತ್ತಿಲ್ಲ. ಅಗತ್ಯ ವಸ್ತುಗಳಾದ ಹಾಲು ಮತ್ತು ತರಕಾರಿ ಖರೀದಿಸಲೂ ಗ್ರಾಮಸ್ಥರೂ ಕಷ್ಟ ಪಡುತ್ತಿದ್ದಾರೆ. ಇತರ ಗ್ರಾಮದವರು ನಮ್ಮನ್ನು ನೋಡಿ ಭಯಬೀಳುತ್ತಿದ್ದಾರೆ. ಯಾರೂ ಇಲ್ಲಿ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ವೀರೆಂದ್ರ ಸಿಂಗ್.