ಇಂದು (ಏ. 24) ವರನಟ ಡಾ. ರಾಜಕುಮಾರ್ ಅವರ 94ನೇ ಜನ್ಮದಿನ. ರಾಜ್ ಬದುಕಿದ್ದರೆ ಈ ವರ್ಷ ಅವರು 93 ವಸಂತಗಳನ್ನು ಕಳೆದು, 94ನೇ ವರ್ಷಕ್ಕೆ ಕಾಲಿರಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರಿಂದು ದೈಹಿಕವಾಗಿ ನಮ್ಮೊಡನಿಲ್ಲ. ಡಾ. ರಾಜಕುಮಾರ್ ದೈಹಿಕವಾಗಿ ಚಿತ್ರರಂಗವನ್ನು ಅಗಲಿ 16 ವರ್ಷಗಳಾದರೂ, ಅವರ ನೆನಪು ಅಭಿಮಾನಿಗಳ ಮನೆ-ಮನಗಳಲ್ಲಿ ಹಚ್ಚ ಹಸಿರಾಗಿ ಉಳಿದಿದೆ.
ಅಣ್ಣಾವ್ರ ನೆನಪಿನಲ್ಲಿ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಅಭಿಮಾನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷವೂ ತಮ್ಮ ನೆಚ್ಚಿನ ನಟ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಡಾ. ರಾಜಕುಮಾರ್ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ 2 ವರ್ಷದಿಂದ ಜನ್ಮದಿನ ಸಂಭ್ರಮ ದೂರ ಕೋವಿಡ್ ಸಾಂಕ್ರಾಮಿಕ ಭಯ ಮತ್ತು ಲಾಕ್‌ಡೌನ್ ಆತಂಕದಿಂದಾಗಿ ಕಳೆದ ಎರಡು ವರ್ಷಗಳು ಡಾ. ರಾಜಕುಮಾರ್ ಅವರ ಜನ್ಮದಿನವನ್ನು ಅಭಿಮಾನಿಗಳು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ.
ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗಿದ್ದರಿಂದ, ಅಭಿಮಾನಿಗಳು ಗುಂಪು ಗುಂಪಾಗಿ ಸೇರಿ ಜನ್ಮದಿನ ಆಚರಿಸದಂತೆ ಡಾ. ರಾಜ್ ಕುಟುಂಬ ವರ್ಗ ಕೂಡ ಅಭಿಮಾನಿಗಳಲ್ಲಿ ಮನವಿ ಮಾಡಿತ್ತು. ಹೀಗಾಗಿ ಅಭಿಮಾನಿಗಳ ಆಸೆಯಂತೆ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಅಣ್ಣಾವ್ರ ಹುಟ್ಟುಹಬ್ಬ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕೋವಿಡ್ ಆತಂಕದಿಂದ ಸ್ವಲ್ಪ ಮಟ್ಟಿಗೆ ವಿನಾಯಿತಿ ಸಿಕ್ಕಿರುವುದರಿಂದ, ಅಭಿಮಾನಿಗಳು ಸಾರ್ವಜನಿಕವಾಗಿ ಹಲವು ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವುದರ ಮೂಲಕ ಅದ್ಧೂರಿಯಾಗಿ ವರನಟನ ಜನ್ಮದಿನವನ್ನು ಆಚರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಹ್ಯಾಂಡ್ಸಮ್ ನಟ Karan Kundra ಸ್ಟೈಲಿಸ್ಟ್ ಫೋಟೋ ಗ್ಯಾಲರಿ
ಸಾಮಾಜಿಕ ಕಾರ್ಯಗಳ ಮೂಲಕ ಅಣ್ಣಾವ್ರ ಸ್ಮರಣೆ ಇನ್ನು ಪ್ರತಿವರ್ಷದಂತೆ ಈ ವರ್ಷವೂ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರದಾನ ನೋಂದಣಿ, ಆಸ್ಪತ್ರೆಗಳಲ್ಲಿ ಹಣ್ಣು-ಹಂಪಲು, ಔಷಧಿ ವಿತರಣೆ, ಅನ್ನದಾನದಂತಹ ಹತ್ತಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಳಿದಂತೆ ಡಾ. ರಾಜಕುಮಾರ್ ಅವರ 94ನೇ ಹುಟ್ಟುಹಬ್ಬದ ಪ್ರಯುಕ್ತ “ಅಖೀಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ (ರಿ)’ ವತಿಯಿಂದ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜಕುಮಾರ್ ಪುಣ್ಯಭೂಮಿಯಲ್ಲಿ “ಡಾ. ರಾಜಕುಮಾರ್ ರಥೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸುಮಾರು 10 ಸಾವಿರ ಮಂದಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ವಸತಿ ಸಚಿವ ವಿ. ಸೋಮಣ್ಣ, ಅಬಕಾರಿ ಸಚಿವ ಕೆ. ಗೋಪಾಲಯ್ಯ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.