ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಮದ್ಯದ ಅಮಲಿ ನಲ್ಲಿ ರಸ್ತೆ ಅಪಘಾತಗಳು, ವ್ಹೀಲಿಂಗ್, ಯುವತಿ ಯರಿಗೆ ಕಿರುಕುಳ, ದೌರ್ಜನ್ಯ ಹಾಗೂ ಕೆಲ ರೋಡ್ ರೇಜ್ ಪ್ರಕರಣಗಳು ಅಧಿಕವಾಗುತ್ತಿವೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸರು ವಾರಾಂತ್ಯದ 4 ದಿನಗಳ ಕಾಲ ರಾತ್ರಿ ವೇಳೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ರಾತ್ರಿ ನಗರ ಸಂಚಾರ ವಿಭಾಗದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 317 ಮಂದಿ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ 868 ಸಿಬ್ಬಂದಿ ಸೇರಿ ಒಟ್ಟು 1,185 ಮಂದಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ 43,676 ವಿವಿಧ ಮಾದರಿಯ ವಾಹನಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 946 ಮಂದಿ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಅವರ ವಾಹನಗಳ ಜಪ್ತಿ ಮಾಡಿದ್ದು, ಚಾಲನಾ ಪರವಾನಗಿ ರದ್ದುಗೊಳಿಸುವಂತೆ ಸಾರಿಗೆ ಇಲಾಖೆ ಶಿಫಾರಸ್ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಮಹಿಳಾ ಪಿಎಸ್‌ಐ ಕಡ್ಡಾಯ: ಸಂಚಾರ ಠಾಣಾ ವ್ಯಾಪ್ತಿ ಯಲ್ಲಿ ರಾತ್ರಿ ವೇಳೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಕಡ್ಡಾಯವಾಗಿ ಮಹಿಳಾ ಪಿಎಸ್‌ಐ ಸ್ಥಳದಲ್ಲಿ ರಬೇಕೆಂದು ಸೂಚಿಸಲಾಗಿದೆ. ಏಕೆಂದರೆ, ವಾರಂತ್ಯದಲ್ಲಿ ಕೆಲವೆಡೆ ಮಹಿಳೆಯರು ಕೂಡ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ, ರಸ್ತೆ ಅಪಘಾತ ಎಸಗಿರುವ ಉದಾಹ ರಣೆಗಳು ಇವೆ. ಹೀಗಾಗಿ ಇಲಾಖೆಯ ಸಿಸಿ ಕ್ಯಾಮೆರಾ ಗಳಿರುವ ಜಂಕ್ಷನ್ ಹಾಗೂ ಸರ್ಕಲ್‌ಗಳಲ್ಲಿ ಮಾತ್ರ ತಪಾಸಣೆ ನಡೆಸಬೇಕು. ಜತೆಗೆ ಅಧಿಕಾರಿ ಅಥವಾ ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಬಳಸಬೇಕು ಎಂದು ಸೂಚಿಸಲಾಗಿದೆ. ಇನ್ನು ಪ್ರಮುಖ ಜಂಕ್ಷನ್ ಹಾಗೂ ಸಿಗ್ನಲ್ ಬಳಿ ಬ್ಯಾರಿಕೇಡ್ ಹಾಕಿಕೊಂಡಿದ್ದು, ಅದರ 50 ಅಥವಾ 100 ಮೀಟರ್ ದೂರದಲ್ಲಿ ಒಬ್ಬ ಸಿಬ್ಬಂದಿ ನಿಂತುಕೊಂಡು, ವಾಹನಗಳನ್ನು ತಡೆಯಲಿ ದ್ದಾರೆ. ಒಂದು ವೇಳೆ ಸವಾರ ಮದ್ಯ ಸೇವಿಸಿರುವುದು ಖಚಿತವಾದರೆ, ಆತನ ವಾಹನ ಜಪ್ತಿ ಮಾಡಿ, ಆತನ ಮೊಬೈಲ್ ಸಂಖ್ಯೆಗೆ ಕೆಲ ಗಂಟೆಗಳ ಬಳಿಕ ನಿಯಮ ಉಲ್ಲಂಘನೆ ಬಗ್ಗೆ ಸಂದೇಶ ಹಾಗೂ ಲಿಂಕ್ ಹೋಗುತ್ತದೆ. ಈ ಲಿಂಕ್ ತೆರೆದು ಆತನ ದಂಡ ಪಾವತಿಸಬೇಕು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಹಾವಳಿ ತಡೆಗ ಟ್ಟುವ ಹಾಗೂ ರಸ್ತೆ ಸುರಕ್ಷತೆ ದೃಷ್ಟಿಯಿಂದ ಇಂತಹ ಡ್ಯಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆಗಳು ಮುಂದುವರಿಯಲಿವೆ. ವಾರದಲ್ಲಿ ನಾಲ್ಕು ದಿನ ಕಾಲ ಕಾರ್ಯಾಚರಣೆ ನಡೆಸಲಾಗುವುದು.
-ಎಂ.ಎನ್.ಅನುಚೇತ್, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ.