ಬೆಳ್ತಂಗಡಿ: ತಾಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಬಸ್ ನಿಲ್ದಾಣದ ಸಮೀಪ ಬೆಲೆ ಬಾಳುವ ಸರಕಾರಿ ಜಮೀನನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ 2016-17ರಲ್ಲಿ ವ್ಯಕ್ತಿಯೋರ್ವರು ವಾಸ್ತವ್ಯೇತರ ಅಂಗಡಿ ಕಟ್ಟಡ (ಗ್ಯಾರೇಜ್)ವನ್ನು ವಾಸ್ತವ್ಯದ ಮನೆಯೆಂದು ಸುಳ್ಳು ದಾಖಲೆ ಸೃಷ್ಟಿಸಿ ಎಚ್‌ಎಸ್‌ಆರ್‌ಎಸ್ 140/2016-17 ರಂತೆ 94ಸಿ ಅಡಿಯಲ್ಲಿ ಹಕ್ಕುಪತ್ರವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.
ಈ ಬಗ್ಗೆ 2017ರಲ್ಲಿ ಸ್ಥಳೀಯರು ನೀಡಿದ ದೂರಿನಂತೆ ಪುತ್ತೂರು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ನ್ಯಾಯಾಲಯವು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಸ್ಥಳ ತನಿಖೆ ನಡೆಸಿ ನಿಯಮಾನುಸಾರ ಪ್ರಕರಣವನ್ನು ಇತ್ಯರ್ಥಪಡಿಸಲು ಆದೇಶಿಸಿತು.
ಈ ಬಗ್ಗೆ ಇತ್ತೀಚಿಗೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ವೇಣೂರು ಕಂದಾಯ ನಿರೀಕ್ಷಕರು, ಬಡಗಕಾರಂದೂರು ಗ್ರಾಮಕರಣಿಕರು ಸ್ಥಳ ಮಹಜರು ನಡೆಸಿದರು.
ಈ ಸಂದರ್ಭದಲ್ಲಿ ಜೋಶಿಲ್ ವೈ ಕುಮಾರ್ ಬಿನ್ ಯೋಗೀಶ್ ಕುಮಾರ್ ಕೆ.ಎಸ್. ಅವರಿಗೆ ಮಂಜೂರುಗೊಂಡ ಬಡಗಕಾರಂದೂರು ಗ್ರಾಮದ ಸ.ನಂ. 84/1ಪಿ1 ರಲ್ಲಿ 0.09 ಎಕ್ರೆ ಜಮೀನಿನಲ್ಲಿ ವಾಸ್ತವ್ಯದ ಮನೆಯ ಬದಲಾಗಿ ವಾಸ್ತವ್ಯೇತರ ಅಂಗಡಿ ಕಟ್ಟಡ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಶರ್ತ ಉಲ್ಲಂಘನೆಯಾಗಿರುವ ಕಾರಣ ಹಕ್ಕುಪತ್ರ ಹಾಗೂ ಜಮೀನಿನ ನಕ್ಷೆಯನ್ನು ರದ್ದುಪಡಿಸಿ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದಾರೆ.
ಪಹಣಿಪತ್ರ ರದ್ದು ಪಡಿಸಿ ಸರಕಾರ ಎಂದು ದಾಖಲಿಸಲು ಆದೇಶ ನೀಡುವಂತೆಯೂ ಪುತ್ತೂರು ಉಪವಿಭಾಗಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.