ಹಾಲಿವುಡ್: 2020-21ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಈ ಬಾರಿ ಅನೇಕ ವಿಶೇಷತೆಗಳಿವೆ. ಚೀನ ಮೂಲದ ನಿರ್ದೇಶಕಿ ಕ್ಲೊ ಝಾವೊ ಅವರ “ನೊಮ್ಯಾಡ್‌ಲ್ಯಾಂಡ್’ ಚಿತ್ರಕ್ಕೆ ಶ್ರೇಷ್ಠ ಚಿತ್ರದ ಗರಿ ಸಿಕ್ಕಿದೆ. ಈ ಚಿತ್ರ ಕ್ಕಾ ಗಿ ಕ್ಲೊ ಝಾವೊ ಅವರಿಗೆ ಶ್ರೇಷ್ಠ ನಿರ್ದೇಶಕಿ ಪ್ರಶಸ್ತಿ ಒಲಿದಿದ್ದು, ಈ ಸಾಧನೆ ಮಾಡಿದ ವಿಶ್ವದ 2ನೇ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಈ ಹಿಂದೆ, ಕ್ಯಾಥೆರಿನ್ ಬಿಗೆಲೊ (“ಅವತಾರ್’ ಖ್ಯಾತಿಯ ಜೇಮ್ಸ್ ಕ್ಯಾಮೆರೂನ್‌ರ ಮಾಜಿ ಪತ್ನಿ) ಅವರಿಗೆ 2000ರಲ್ಲಿ “ದ ಹರ್ಟ್ ಲಾಕರ್’ ಚಿತ್ರಕ್ಕಾಗಿ ಶ್ರೇಷ್ಠ ನಿರ್ದೇಶಕಿ ಪ್ರಶಸ್ತಿ ಬಂದಿದ್ದು, ಆ ಮೂಲಕ ಆ ಪ್ರಶಸ್ತಿ ಪಡೆದ ಮೊದಲ ನಿರ್ದೇಶಕಿ ಎಂಬ ಗೌರವಕ್ಕೆ ಬಿಗೆಲೋ ಭಾಜನರಾಗಿದ್ದರು. ಆ ಸಾಧಕಿಯರ ಪಟ್ಟಿಗೆ ಕ್ಲೊ ಝೆವೊ ಕೂಡ ಸೇರ್ಪಡೆಯಾಗಿದ್ದಾರೆ.
ಹಾಪ್ ಕಿನ್ಸ್ ಶ್ರೇಷ್ಠ ನಟ: ಹಾಲಿವುಡ್‌ನ ಹಿರಿಯ ನಟ ಅಂತೋನಿ ಹಾಪ್‌ಕಿನ್ಸ್ ಅವರು ಶ್ರೇಷ್ಠ ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಾರಿ ಅವರಿಗೆ, 2020ರಲ್ಲಿ ಬಿಡುಗಡೆಯಾಗಿದ್ದ ದ ಫಾದರ್ ಚಿತ್ರಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಸಂದಿದೆ. ಇದು ಅವರಿಗೆ 2ನೇ ಆಸ್ಕರ್ ಆಗಿದ್ದು, 1992ರಲ್ಲಿಯೂ ಅವರಿಗೆ ದ ಸೈಲೆನ್ಸ್ ಆಫ್ ದ ಲ್ಯಾಂಬ್ಸ್ ಚಿತ್ರಕ್ಕಾಗಿ ಈ ಗೌರವ ದೊರೆತಿತ್ತು.
“ನೊಮ್ಯಾಡ್‌ಲ್ಯಾಂಡ್’ ಚಿತ್ರದ ಅಭಿನಯಕ್ಕಾಗಿ ಫ್ರಾನ್ಸಿಸ್ ಮ್ಯಾಕ್‌ಡೊರ್ಮಾಂಡ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಸಿಕ್ಕಿದೆ. ಶ್ರೇಷ್ಠ ನಟಿಯಾಗಿ ಇದು ಅವರ 3ನೇ ಆಸ್ಕರ್, ಆದರೆ ಒಟ್ಟಾರೆಯಾಗಿ 6ನೇ ಆಸ್ಕರ್. ಹೆಸರಾಂತ ಅನಿಮೇಷನ್ ಚಿತ್ರ ಸಂಸ್ಥೆ ಪಿಕ್ಸರ್ ಅವರ ಹೆಮ್ಮೆಯ ಚಿತ್ರ “ಸೋಲ್’ಗೆ ಶ್ರೇಷ್ಠ ಅನಿಮೇಶನ್ ಮೂವಿ ಹಾಗೂ ಶ್ರೇಷ್ಠ ಹಿನ್ನೆಲೆ ಸಂಗೀತ ಪ್ರಶಸ್ತಿಗಳು ಸಂದಿವೆ.
ಭಾರತೀಯರಿಗೆ ಗೌರವ
ಭಾರತ ಮೂಲದ ಸ್ವಾತಿ ತ್ಯಾಗರಾಜನ್ ಅವರ ಸಹ ನಿರ್ಮಾಣದ “ಮೈ ಆಕ್ಟೋ ಪಸ್ ಟೀಚರ್’ ಎಂಬ ಆಂಗ್ಲ ಚಿತ್ರಕ್ಕೆ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಸಂದಿದೆ. ಅಲ್ಲದೆ, ಆಸ್ಕರ್ ಸಮಿತಿಯು ಕಳೆದ ವರ್ಷ ಅಗಲಿದ ಬಾಲಿವುಡ್ ನಟರಾದ ಇರ್ಫಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಹಾಗೂ ಬಾಲಿವುಡ್‌ನ ವಸ್ತ್ರವಿನ್ಯಾಸಕಿ ಭಾನು ಅವರನ್ನು ಸ್ಮರಿಸಿದೆ.