Advertisement

ಅಂಗಡಿಯಿಂದ 9.25 ಲ. ರೂ. ನಗದು ಕದ್ದ  ಕಾರ್ಮಿಕ ಗೋವಾದಲ್ಲಿ ಸೆರೆ

07:20 AM Aug 14, 2017 | Harsha Rao |

ಮಂಗಳೂರು: ನಗರದ ಬಂದರು ಬೀಬಿ ಅಲಾಬಿ ರಸ್ತೆಯ ಸೆಲ್ಫ್ ರ್ಯಾಕ್‌ ತಯಾರಿಸುವ ಅಂಗಡಿಯಿಂದ 9.25ಲಕ್ಷ ರೂ. ಕಳವು ಮಾಡಿ ಪರಾರಿಯಾಗಿದ್ದ ಅಸ್ಸಾಂ ಮೂಲದ ಜಸೀಮ್‌ ಉದ್ದೀನ್‌ ಯಾನೆ ಜಸು¾ದ್ದೀನ್‌ ಲಷ್ಕರ್‌(41)ನನ್ನು ಬಂಧಿಸುವಲ್ಲಿ ಬಂದರು ಪೊಲೀಸರು ಯಶಸ್ವಿಯಾಗಿದ್ದಾರೆ. 

Advertisement

ಆರೋಪಿಯನ್ನು  ನಗರದ ಬಂದರು ಪೊಲೀಸರು ಗೋವಾದ ಕೊಂಕಣ ರೈಲ್ವೇ ಪೊಲೀಸರ ಸಹಕಾರದಲ್ಲಿ ಮಾರ್ಗೋವಾದಲ್ಲಿ ಬಂಧಿಸಿ 9 ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ. 

ಉಳಿದ 25,000 ರೂ. ಗಳನ್ನು ತಾನು ಸ್ವಂತ ಖರ್ಚಿಗೆ ಬಳಕೆ ಮಾಡಿರುವುದಾಗಿ ಆತ ತಿಳಿಸಿದ್ದಾನೆ. 
ಆರೋಪಿಯನ್ನು ವಿಚಾರಣೆ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಸೆಲ್ಫ್ ರ್ಯಾಕ್‌ ತಯಾರಿಸುವ ಈ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಕೊಂಡಿದ್ದ ಜಸೀಮ್‌ ಉದ್ದೀನ್‌ ಯಾನೆ ಜಸು¾ದ್ದೀನ್‌ ಲಷ್ಕರ್‌ ಆ. 10ರಂದು ಮಧ್ಯಾಹ್ನ 12.30ರಿಂದ 1 ಗಂಟೆ ಅವಧಿಯಲ್ಲಿ ಅಂಗಡಿಯ ಮಾಲಕ ಇಸ್ಮಾಯಿಲ್‌ ಅವರು ವ್ಯವಹಾರಕ್ಕೆ ಸಂಬಂಧಿಸಿದ 9.25 ಲಕ್ಷ ರೂ.ಗಳ‌ನ್ನು ಪ್ಲಾಸ್ಟಿಕ್‌ ತೊಟ್ಟೆಯೊಂದರಲ್ಲಿ ಕಟ್ಟಿ ಅಂಗಡಿಯಲ್ಲಿಟ್ಟು ಹೋಗಿದ್ದ ಸಂದರ್ಭದಲ್ಲಿ  ಅದನ್ನು ಕಳವು ಮಾಡಿಕೊಂಡು ಹೋಗಿದ್ದನು. ಅಂಗಡಿ ಮಾಲಕರು ಮರಳಿ ಬಂದು ನೋಡುವಾಗ ಹಣ ಮತ್ತು ಕೆಲಸಕ್ಕಿದ್ದ ಕಾರ್ಮಿಕ ನಾಪತ್ತೆಯಾಗಿದ್ದರಿಂದ ಈ ಬಗ್ಗೆ ಬಂದರು ಠಾಣೆಗೆ ದೂರು ಸಲ್ಲಿಸಿದ್ದರು. 

ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಾರ್ಗೋವಾದಲ್ಲಿರುವ ಕೊಂಕಣ ರೈಲ್ವೇ ಪೊಲೀಸರ  ಸಹಕಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಆದೇಶದಂತೆ ಡಿಸಿಪಿ ಹನುಮಂತರಾಯ ಮತ್ತು ಎಸಿಪಿ ಉದಯ ನಾಯಕ್‌ ನಿರ್ದೇಶದಂತೆ ನಡೆದ ಕಾರ್ಯಾಚರಣೆಯಲ್ಲಿ ಬಂದರು ಪೊಲೀಸ್‌ ಇನ್ಸ್‌ಪೆಕ್ಟರ್‌ ಶಾಂತರಾಮ್‌, ಎಎಸ್‌ಐ ಪದ್ಮನಾಭ, ಎಎಸ್‌ಐ ಶೋಭಾ, ಹೆಡ್‌ಕಾನ್ಸ್‌ಟೆಬಲ್‌ ಸುಜನ್‌ ಶೆಟ್ಟಿ, ಕಾನ್ಸ್‌ಟೆಬಲ್‌ ಗೋವರ್ಧನ್‌ ಅವರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next