Advertisement

92 ಸಾವಿರ ಕುಟುಂಬಕ್ಕೆ ಸ್ವಂತ ಮನೆಯೇ ಇಲ್ಲ!

08:00 AM Jul 02, 2019 | Suhan S |

ಬಾಗಲಕೋಟೆ: ಗುಡಿಸಲು ಮುಕ್ತ ರಾಜ್ಯ ನಿರ್ಮಾಣ, ಪ್ರತಿಯೊಬ್ಬರಿಗೂ ಸ್ವಂತ ಸೂರು ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವ ಘೋಷಣೆಗಳೊಂದಿಗೆ ಎಲ್ಲರಿಗೂ ಸೂರು ಒದಗಿಸುವ ಭರವಸೆ ಕೊಟ್ಟರೂ ಜಿಲ್ಲೆಯ 92 ಸಾವಿರ ಕುಟುಂಬಗಳು ಈ ವರೆಗೆ ಸ್ವಂತ ಸೂರನ್ನೇ ಹೊಂದಿಲ್ಲ ಎಂದರೆ ನಂಬಲೇಬೇಕು.

Advertisement

ಹೌದು, ಜಿಲ್ಲೆಯಲ್ಲಿ 2011ರ ಸಮೀಕ್ಷೆ ಪ್ರಕಾರ 3,53,852 ಕುಟುಂಬಗಳಿವೆ. 2019ನೇ ಇಸ್ವಿಗೆ ಸುಮಾರು ಶೇ. 15 ಕುಟುಂಬಗಳು ಹೆಚ್ಚಿಗೆ ಆಗಿರಬಹುದು ಎನ್ನಲಾಗುತ್ತಿದೆ. 20011ರ ಬಳಿಕ 4 ಲಕ್ಷ ವರೆಗೆ ಕುಟುಂಬಗಳು ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.

ಜಿಲ್ಲಾದ್ಯಂತ ಸಮೀಕ್ಷೆ: ಕಳೆದ ವರ್ಷ ಜಿಲ್ಲೆಯಾದ್ಯಂತ ಸ್ವಂತ ಮನೆ, ನಿವೇಶನ ಇಲ್ಲದ ಕುಟುಂಬ ಸಮೀಕ್ಷೆ ಮಾಡಿದ್ದು, ಇದೀಗ ಅಧಿಕೃತಗೊಳಿಸಲಾಗಿದೆ. ಒಟ್ಟು ಕುಟುಂಬಗಳಲ್ಲಿ 92,112 ಕುಟುಂಬಗಳು ಇಂದಿಗೂ ಸ್ವಂತ ಸೂರು ಹೊಂದಿರಲ್ಲಿ. ಅವರೆಲ್ಲ ಗುಡಿಸಲು, ಬಾಡಿಗೆ ಮನೆಗಳಲ್ಲೇ ವಾಸವಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬ ಕಲ್ಪನೆ ಇಂದಿಗೂ ಈಡೇರಿಲ್ಲ.

ಸಮೀಕ್ಷೆ ಪ್ರಕಾರ 61,675 ಕುಟುಂಬಗಳು ಸ್ವಂತ ಮನೆ ಹೊಂದಿಲ್ಲ. 30,437 ಕುಟುಂಬಗಳಿಗೆ ಸ್ವಂತ ನಿವೇಶನವೂ ಇಲ್ಲ. ಸಂವಿಧಾನದ ಆಶಯದ ಪ್ರಕಾರ ಒಂದು ಸರ್ಕಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಂತ ಮನೆ, ಮೂಲಭೂತ ಸೌಲಭ್ಯ ಕಲ್ಪಿಸುವುದು ಆಯಾ ಸ್ಥಳೀಯ ಸರ್ಕಾರದ ಕರ್ತವ್ಯ. ಆದರೆ, ಈ ವರೆಗೆ ಜಿಲ್ಲೆಯ 92 ಸಾವಿರ ಕುಟುಂಬಗಳಿಗೆ ಸ್ವಂತ ಸೂರೇ ಇಲ್ಲ ಎಂಬುದು ವಿಪರ್ಯಾಸದ ಸಂಗತಿ ಎನ್ನುತ್ತಾರೆ ಪ್ರಜ್ಞಾವಂತರು.

ಮಾಜಿ ಸಿಎಂ ಸಿದ್ದು ಕ್ಷೇತ್ರದಲ್ಲೇ ಹೆಚ್ಚು ಸೂರಿಲ್ಲ: ಜಮಖಂಡಿ-25,657, ಬೀಳಗಿ-5334, ಮುಧೋಳ-10,685, ಬಾದಾಮಿ – 21,019, ಬಾಗಲಕೋಟೆ – 13,422, ಹುನಗುಂದ-15,995 ಸೇರಿ ಒಟ್ಟು 92,112 ಕುಟುಂಬಗಳಿಗೆ ಸ್ವಂತ ಸೂರು-ನಿವೇಶನವಿಲ್ಲ. ಇನ್ನೊಂದು ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲೇ ಅತಿ ಹೆಚ್ಚು ಕುಟುಂಬಗಳಿಗೆ ಸ್ವಂತ ಮನೆಯಿಲ್ಲ.

Advertisement

ಯಾವ ವರ್ಗದ ಕುಟುಂಬ ಎಷ್ಟು ?: ಸ್ವಂತ ಸೂರು, ನಿವೇಶನ ಹೊಂದಿಲ್ಲದವರ ವರ್ಗವಾರು ಸಮೀಕ್ಷೆ ಮಾಡಲಾಗಿದೆ. ಒಟ್ಟು ಸೂರು ರಹಿತ ಕುಟುಂಬಗಳಲ್ಲಿ 65,474 ಕುಟುಂಬಗಳು ಬಿಪಿಎಲ್ ಪಡಿತರ ಚೀಟಿದಾರರೇ ಇದ್ದಾರೆ. ಈ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ.

ಪರಿಶಿಷ್ಟ ಜಾತಿಗೆ ಸೇರಿದ 8,603 ಕುಟುಂಬಕ್ಕೆ ಸ್ವಂತ ಮನೆ ಇಲ್ಲದಿದ್ದರೆ, 2,884 ಕುಟುಂಬಗಳಿಗೆ ಸ್ವಂತ ನಿವೇಶನವಿಲ್ಲ. ಅಲ್ಪ ಸಂಖ್ಯಾತರಲ್ಲಿ 4,408 ಕುಟುಂಬಕ್ಕೆ ವಸತಿ, 2,946 ಕುಟುಂಬಗಳಿಗೆ ನಿವೇಶನವಿಲ್ಲ.

ಇನ್ನು ಸಾಮಾನ್ಯ ವರ್ಗಕ್ಕೆ ಸೇರಿದ 45,780 ಕುಟುಂಬಗಳಿಗೆ ಸ್ವಂತ ಮನೆ ಇಲ್ಲದಿದ್ದರೆ, 19,897 ಕುಟುಂಬಗಳಿವೆ ಸ್ವಂತ ನಿವೇಶನವಿಲ್ಲ. ಒಟ್ಟು ನಿವೇಶನ ಹಾಗೂ ಸ್ವಂತ ಮನೆ ಇಲ್ಲದ ಕುಟುಂಬಗಳಲ್ಲಿ 14,297 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದರೆ, 4,784 ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿವೆ. 7,354 ಕುಟುಂಬಗಳು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ್ದು, 65,677 ಕುಟುಂಬಗಳು ಸಾಮಾನ್ಯ ವರ್ಗಕ್ಕೆ ಸೇರಿವೆ.

ಸ್ವಂತ ಮನೆ ಮತ್ತು ನಿವೇಶನವಿಲ್ಲದ ಕುಟುಂಬಗಳಲ್ಲಿ ಬಾದಾಮಿ ತಾಲೂಕಿನಲ್ಲಿ ಹೆಚ್ಚಿದ್ದಾರೆ. ಇದನ್ನು ಮನಗಂಡು ಬಾದಾಮಿ ಕ್ಷೇತ್ರಕ್ಕೆ 8200 ಆಶ್ರಯ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಈಗಾಗಲೇ ಪಿಡಿಒಗಳ ಸಭೆ ಕರೆದು, ಮನೆ ಇಲ್ಲದವರಿಗೆ ಆಶ್ರಯ ಮನೆ ನಿರ್ಮಿಸಲು ಸೂಚನೆ ನೀಡಲಾಗಿದೆ. ನಿವೇಶನರಹಿತರಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಗುರುತಿಸಿ, ನಿವೇಶನ-ವಸತಿ ಸೌಲಭ್ಯ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. • ಸಿದ್ದರಾಮಯ್ಯ,ಮಾಜಿ ಸಿಎಂ, ಬಾದಾಮಿ ಶಾಸಕ

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next