ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಟಾಪ್-20 ಆಸ್ತಿದಾರರಿಂದಲೇ 91 ಕೋಟಿ ರೂ. ಬಾಕಿ ಬರಬೇಕಿದೆ.
ಈ ಮಧ್ಯೆ ವಲಯವಾರು ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಪಾಲಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಇವರಲ್ಲಿ ಟಾಪ್ 20 ಆಸ್ತಿ ಬಾಕಿದಾರರ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದ್ದು, ಬಾಕಿ ಉಳಿಸಿಕೊಂಡ ಬಾಕಿದಾರರ ಪಟ್ಟಿಯಲ್ಲಿ ಬಿಎಂಆರ್‌ಸಿಎಲ್ ಸೇರಿ ಸರ್ಕಾರದ ಸಂಸ್ಥೆಗಳೂ ಇವೆ. ನಗರದ ಪ್ರತಿಷ್ಠಿತ ಕಂಪನಿಗಳು, ಬಿಲ್ಡರ್‌ಗಳು ಹಾಗೂ ಆಸ್ತಿದಾರರಿಂದ 1,211 ಕೋಟಿ ರೂ. ಆಸ್ತಿ ತೆರಿಗೆ ಪಾವತಿಯಾಗಬೇಕಿರುವ ಸಂಬಂಧ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಈಗಾಗಲೇ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಾರ್ಯಮುಖರಾಗಿದ್ದಾರೆ. ಆದರೆ, ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಮಾಡುವುದಕ್ಕೆ ಕಾನೂನು ತೊಡಕು ಸೇರಿದಂತೆ ಹಲವು ಅಡೆತಡೆಗಳು ಸೃಷ್ಟಿಯಾಗಿವೆ. ಹೀಗಾಗಿ, ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಶಿಫಾರಸು ಮಾಡಲು ಪಾಲಿಕೆ ಮುಂದಾಗಿದೆ.
ಶಿಫಾರಸು ಮಾಡಲು ಚಿಂತನೆ: ಪಾಲಿಕೆಯ ಕೆಎಂಸಿ ಕಾಯ್ದೆಯ ಅನ್ವಯ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿ ಅವರ ಚರ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತದೆ. ಚರ ಆಸ್ತಿ ಜಪ್ತಿ ಮಾಡುವುದರಿಂದ ಆಸ್ತಿತೆರಿಗೆ ಬಾಕಿದಾರರಿಂದ ಹೆಚ್ಚು ಬಾಕಿ ವಸೂಲಿ ಮಾಡಲಾಗುವುದಿಲ್ಲ. ವಶಪಡಿಸಿಕೊಂಡ ಚರ ಆಸ್ತಿಯನ್ನು ಹರಾಜು ಒಂದೆಡೆ ಸಂಗ್ರಹ ಮಾಡುವುದು ಹಾಗೂ ಅದನ್ನು ಹರಾಜು ಹಾಕಿ ಹಣ ಗಳಿಸುವುದು ಸುದೀರ್ಘ ಪ್ರಕ್ರಿಯೆ.ಹೀಗಾಗಿ. ಇದರ ಬದಲಿಗೆ ಆಸ್ತಿದಾರರ ಸ್ಥಿರ ಆಸ್ತಿಯನ್ನು ವಶಪಡಿಸಿಕೊಳ್ಳುವ ನಿಯಮ ಜಾರಿಯಾಗ ಬೇಕು. ಕಂದಾಯ ಇಲಾಖೆಗೆ ಇದರ ಅವಕಾಶ ಇದೆ. ಇದೇ ಮಾದರಿಯಲ್ಲಿ ಪಾಲಿಕೆಯ ಕೆಎಂಸಿ ಕಾಯ್ದೆಯಲ್ಲಿ ಅಥವಾ ನೂತನ ಪ್ರತ್ಯೇಕ ಬಿಬಿಎಂಪಿ ಕಾಯ್ದೆಯಲ್ಲಿ ಈ ಅಂಶವನ್ನು ಸೇರಿಸಿದರೆ ಉತ್ತಮ. ಆಗ ಆಸ್ತಿದಾರರು ಸ್ಥಿರ ಆಸ್ತಿ ಕಳೆದುಕೊಳ್ಳುವ ಭಯ ಇರುತ್ತದೆ. ಈ ಕುರಿತು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಲು ಚಿಂತನೆ ಇದೆ ಎಂದು ಪಾಲಿಕೆಯ ಕಂದಾಯವ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಬಾಕಿದಾರರಿಂದ ಬೆದರಿಕೆ, ಜನಪ್ರತಿನಿಧಿಗಳ ಮೂಲಕ ಒತ್ತಡ?: ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಂದ ಬಾಕಿ ವಸೂಲಿ ಮಾಡುವುದು ಸವಾಲಾಗಿದೆ. ಕಾನೂನು ತೊಡಕಿನ ಜತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳ ಒತ್ತಡವೂ ಇದೆ. ಮಾಹಿತಿಯನ್ನು ಮಾಧ್ಯಮಗಳಿಗೆ ನೀಡ ದಂತೆಯೂ ಒತ್ತಡ ಹೇರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪಟ್ಟಿಯನ್ನು ವಲಯವಾರು ಸಿದ್ಧಪಡಿಸಿಕೊಂಡು ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದರಂತೆ ವಲಯವಾರು ಪಟ್ಟಿ ಸಿದ್ಧಪಡಿಸಿಕೊಂಡು ಕ್ರಮ ವಹಿಸಲಾಗುವುದು.
–ಎನ್. ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತ
– ಹಿತೇಶ್ ವೈ