Advertisement

91 ವೈದ್ಯಾಧಿಕಾರಿಗಳ ವಜಾಗೆ ಶಿಫಾರಸು ಮಾಡಲು ನಿರ್ಧಾರ

03:45 AM Feb 01, 2017 | Team Udayavani |

ಬೆಂಗಳೂರು: ಅನಧಿಕೃತವಾಗಿ 120ಕ್ಕೂ ಹೆಚ್ಚು ದಿನ ಗೈರು ಹಾಜರಾಗಿದ್ದ 103 ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲು ನೀಡಲಾಗಿದ್ದ ಕಾಲಾವಕಾಶ (ಜ.31) ಮಂಗಳವಾರ ಮುಕ್ತಾಯವಾಗಿದ್ದು, 12 ವೈದ್ಯಾಧಿಕಾರಿಗಳು
ಸೇವೆಗೆ ಮರಳಿದ್ದಾರೆ. ಹಾಗಾಗಿ ಇನ್ನುಳಿದ 91 ಮಂದಿ ವಜಾಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

Advertisement

ಜನರಿಗೆ ಅತ್ಯವಶ್ಯಕವಾದ ಆರೋಗ್ಯ ಸೇವೆ ಒದಗಿಸುವಂತಹ ಮಹತ್ವದ ಕಾರ್ಯಕ್ಕೆ ನಿಯೋಜನೆ ಗೊಂಡಿದ್ದ ವೈದ್ಯಾಧಿಕಾರಿಗಳು 120ಕ್ಕೂ ಹೆಚ್ಚು ದಿನಗಳಿಂದ ಅನಧಿಕೃತವಾಗಿ ಗೈರಾಗಿದ್ದರು. ಆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೊದಲ ಹಂತದಲ್ಲಿ ದೀರ್ಘ‌ಕಾಲ ಗೈರು ಹಾಜರಾದ 103 ವೈದ್ಯಾಧಿಕಾರಿಗಳನ್ನು ಗುರುತಿಸಿ ಜ.31ರೊಳಗೆ ವರದಿ
ಮಾಡಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ 12 ವೈದ್ಯಾಧಿಕಾರಿಗಳು ಕಾಲಮಿತಿಯೊಳಗೆ ಕರ್ತವ್ಯಕ್ಕೆ ಮರಳಿದ್ದಾರೆ. ಆದರೆ 91 ಮಂದಿ ವರದಿ ಮಾಡಿಕೊಂಡಿಲ್ಲ.

ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ವೈದ್ಯಾಧಿಕಾರಿಗಳು ವರದಿ ಮಾಡಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶ ಮುಗಿದಿದ್ದು, 12 ಮಂದಿ ಸೇವೆಗೆ ಹಿಂತಿರುಗಿದ್ದಾರೆ. ಸೇವೆಗೆ ಬಾರದ 91 ವೈದ್ಯಾಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸೇವೆಗಳ ಆಯುಕ್ತ ಸುಬೋಧ್‌ ಯಾದವ್‌ “ಉದಯವಾಣಿ’ಗೆ ತಿಳಿಸಿದರು.

210 ಮಂದಿಗೂ ವಜಾ ಎಚ್ಚರಿಕೆ
ವೈದ್ಯಾಧಿಕಾರಿಗಳು ಮಾತ್ರವಲ್ಲದೇ 120 ದಿನಕ್ಕೂ ಹೆಚ್ಚು ದಿನ ಅನಧಿಕೃತ ಗೈರಾದ “ಸಿ’ ಮತ್ತು “ಡಿ’ ದರ್ಜೆಯ ಒಟ್ಟು 210 ನೌಕರರು ವರದಿ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಫೆ.6ರವರೆಗೆ ಗಡುವು ನೀಡಿದೆ.

ಶುಶ್ರೂಷಕರು, ಲ್ಯಾಬ್‌ ಟೆಕ್ನಿಷಿಯನ್‌ಗಳು, ಎಕ್ಸ್‌ರೇ ಟೆಕ್ನಿಷಿಯನ್‌, ಫಾರ್ಮಸಿಸ್ಟ್‌, ಪ್ರಥಮ/ ದ್ವಿತೀಯ ದರ್ಜೆ ಸಹಾಯಕರು, ಚಾಲಕರು, “ಡಿ’ ದರ್ಜೆ ಸಿಬ್ಬಂದಿ ಸೇರಿ 210 ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಆ ಹಿನ್ನೆಲೆಯಲ್ಲಿ ಅನಧಿಕೃತ ಗೈರು ಹಾಜರಾದವರ ವಿವರವನ್ನು ಇಲಾಖೆ ವೆಬ್‌ಸೈಟ್‌ನಲ್ಲಿ
ಪ್ರಕಟಿಸಿದ್ದು, ಕುತೂಹಲ ಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next