ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಚಿನ್ನದ ಪದಕ ಗೆಲ್ಲಬೇಕಾದರೆ 90 ಮೀಟರ್ ಗಿಂತ ಹೆಚ್ಚಿನ ದೂರಕ್ಕೆ ಎಸೆಯಲೇಬೇಕಾದ ಒತ್ತಡಕ್ಕೆ ಇಂದು ನೀರಜ್ ಚೋಪ್ರಾ ಒಳಗಾಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ನೀರಜ್, ನನ್ನ ಗಮನ ಯಾವಾಗಲೂ 90 ಮೀ ಮಾರ್ಕ್ ಮೀರುವ ಮೇಲೆ ಇಲ್ಲ. ಆದರೆ ನಾನು ಆದಷ್ಟು ಸ್ಥಿರ ಪ್ರದರ್ಶನ ನೀಡುವತ್ತ ಫೋಕಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಇಂದು ಅವರು ಗರಿಷ್ಠ 88.13 ಮೀಟರ್ ದೂರ ಜಾವೆಲಿನ್ ಎಸೆದರು. ಚಿನ್ನದ ಪದಕ ಪಡೆದ ಆಂಡರ್ಸನ್ ಪೀಟರ್ಸ್ ಅವರು 90.54 ಮೀ ದೂರಕ್ಕೆ ಥ್ರೋ ಮಾಡಿದರು.
ನೀರಜ್ ಚೋಪ್ರಾ ಅವರು ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಾಗ 90 ಮೀ ಮಾರ್ಕ್ ಅನ್ನು ಮುರಿಯುವ ಸಮೀಪಕ್ಕೆ ಬಂದಿದ್ದರು. ಮೇನಲ್ಲಿ ನಡೆದಿದ್ದ ಪಾವೊ ನೂರ್ಮಿ ಗೇಮ್ಸ್ ನಲ್ಲಿ ಅವರು 89.30 ಮೀ ಎಸೆದಿದ್ದರು.
ಇದನ್ನೂ ಓದಿ:‘ವಿಕಿಪೀಡಿಯ’ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ
“ಒಲಿಂಪಿಕ್ಸ್ ನಂತರ ನಾನು ನನ್ನ ತರಬೇತಿಯನ್ನು ಸ್ವಲ್ಪ ತಡವಾಗಿ ಪ್ರಾರಂಭಿಸಿದೆ. ನನ್ನ ರಿಲೀಸ್ ಆ್ಯಂಗಲ್ ಕುರಿತಾಗಿ ಕೆಲಸ ಮಾಡಿದ್ದೇನೆ. ಈ ವರ್ಷ ಥ್ರೋಗಳು ಬಹಳ ಸ್ಥಿರವಾಗಿವೆ. ಹೌದು, 90 ಮೀ ಮಾರ್ಕನ್ನು ಇನ್ನೂ ಮೀರಲಾಗಿಲ್ಲ, ಆದರೆ ನಾನು ಅದಕ್ಕೆ ತುಂಬಾ ಹತ್ತಿರವಾಗಿದ್ದೇನೆ” ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.