Advertisement
ಇಂಥ ಸಾಹಸಗಾಥೆಗೆ ಸಾಕ್ಷಿಯಾಗಿರುವುದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಹಿಂದೆ ವ್ಯವಸಾಯವೇ ಮೂಲ ಕಸುಬಾಗಿತ್ತು. ಈಗ ಸಿಮೆಂಟ್ ಕಾರ್ಖಾನೆ ಪ್ರಾರಂಭವಾಗಿದ್ದು, ಅದಕ್ಕಾಗಿ ಗ್ರಾಮಸ್ಥರು ತಮ್ಮ ಜಮೀನು ನೀಡಿ ತಾವು ಇತರ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ಹಸು ಸಾಕಾಣಿಕೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತೀ ಮನೆಯಲ್ಲೂ ದನಕರುಗಳಿದ್ದು, ಗ್ರಾಮದಲ್ಲಿ ಸುಮಾರು 2 ಸಾವಿರ ರಾಸುಗಳಿವೆ.
ಕೆಲಸಕ್ಕೆ ತೆರಳುವ ಬಹುತೇಕ ಗ್ರಾಮಸ್ಥರಿಗೆ ಹಸುಕರು ಮೇಯಿಸಲು ಆಗುವುದಿಲ್ಲ. ಹೀಗಾಗಿ ಇದೇ ಗ್ರಾಮದ ಐದಾರು ಯುವಕರು ಸೇರಿ ಒಂದು ತಂಡ ಕಟ್ಟಿಕೊಂಡಿದ್ದಾರೆ. ಇಡೀ ಗ್ರಾಮದ ಎಲ್ಲ ಜಾನುವಾರುಗಳನ್ನು ಇದೇ ಐದಾರು ಮಂದಿ ಊರಾಚೆಗಿನ ಅಡವಿಗೆ ಮೇಯಿಸಲು ಕರೆದೊಯ್ಯುತ್ತಾರೆ. ಮೇಯಿಸುವುದಕ್ಕಾಗಿ ರಾಸುಗಳನ್ನು 3-4 ಗುಂಪುಗಳಾಗಿ ಹಂಚಿಕೊಂಡಿರುವ ಯುವಕರು ಪ್ರತೀ ಹಸುವಿಗೆ ಮಾಸಿಕ 450 ರೂ. ನಿಗದಿ ಮಾಡಿದ್ದಾರೆ. ಒಬ್ಬ ಯುವಕ ಸುಮಾರು 200 ಹಸುಗಳನ್ನು ಮೇಯಿಸುತ್ತಾನೆ. ಹೀಗಾಗಿ ತಂಡದ ಪ್ರತಿಯೊಬ್ಬ ಯುವಕ ಮಾಸಿಕ ಸುಮಾರು 90 ಸಾವಿರ ರೂ. ಆದಾಯ ಗಳಿಸುತ್ತಿದ್ದಾನೆ.
Related Articles
ಇಂಗಳಗಿ ಗ್ರಾಮಸ್ಥರು ಡೈರಿ ಹಾಲನ್ನು ಬಹಿಷ್ಕರಿಸಿದ್ದಾರೆ. ಪ್ರತೀ ಮನೆಯಲ್ಲೂ ಹಸು ಇರುವುದರಿಂದ ತಮ್ಮ ಮನೆ ಬಳಕೆಗೆ ಅದೇ ಹಸುವಿನ ಹಾಲನ್ನೇ ಬಳಸುತ್ತಾರೆ. ಯಾವುದೇ ಕಾರಣಕ್ಕೂ ಡೈರಿ ಹಾಲನ್ನು ಉಪಯೋಗಿಸುವುದಿಲ್ಲ. ಇದನ್ನು ಹಳ್ಳಿಯ ಎಲ್ಲ ಜನರೂ ಪಾಲಿಸುತ್ತಾರೆ. ಪರಸ್ಪರ ಸಹಕಾರ ಮನೋಭಾವದಿಂದ ಬದುಕು ಸಾಗಿಸುತ್ತಿದ್ದಾರೆ.
Advertisement
-ಮಡಿವಾಳಪ್ಪ ಹೇರೂರ