Advertisement

ಕಿಲೋ ಕ್ಯಾರೆಟ್‌ 90 ರೂ.

09:11 PM Aug 10, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಮಾರುಕಟ್ಟೆಯಲ್ಲಿ ಈಗ ಕ್ಯಾರೆಟ್‌ಗೆ ಚಿನ್ನದ ಬೆಲೆ ಬಂದಿದೆ. ಕಿಲೋ ಕ್ಯಾರೆಟ್‌ ಮಾರುಕಟ್ಟೆಯಲ್ಲಿ ಹೆಚ್ಚು ಅಂದರೆ 20, 30 ರೂ. ಗಡಿ ದಾಟಿರುವವ ನಿದರ್ಶನಗಳಿವೆ. ಆದರೆ ಸದ್ಯದ ಮಾರುಕಟ್ಟೆಯಲ್ಲಿ ಕೆ.ಜಿ. ಕ್ಯಾರೆಟ್‌ ಬರೋಬ್ಬರಿ 80 ರಿಂದ 90 ರೂ.ಗೆ ಮಾರಾಟಗೊಂಡು ಗಮನ ಸೆಳೆದಿದೆ.

Advertisement

ಬೆಳೆಗಾರರಿಗೆ ಸಂತಸ: ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಮಾರುಕಟ್ಟೆ ಇತಿಹಾಸದಲ್ಲಿ ಕ್ಯಾರೆಟ್‌ಗೆ ಈ ಪರಿ ಬೆಲೆ ಸಿಗುತ್ತಿರುವುದು ಇದೇ ಮೊದಲು. ಹಲವು ತಿಂಗಳ ಹಿಂದೆಯಷ್ಟೇ ಕ್ಯಾರೆಟ್‌ ಕೆ.ಜಿ 8, 10 ರೂ.ಗೆ ಮಾರಾಟವಾಗಿ ಜಿಲ್ಲೆಯ ಬೆಳೆಗಾರರು ಹಾಕಿದ ಬಂಡವಾಳ ಕೈಗೆ ಬಾರದೇ ಕೈ ಸುಟ್ಟುಕೊಂಡು ಕಣ್ಣೀರು ಸುರಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ದಿಢೀರನೇ ಕ್ಯಾರೆಟ್‌ ಬೆಲೆ ಗಗನಕ್ಕೇರಿರುವುದು ಈಗ ಬೆಳೆಗಾರರಲ್ಲಿ ಸಂತಸ ತಂದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಕೈ ಕಚ್ಚುವಂತೆ ಮಾಡಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಟೊಮೆಟೋ, ಆಲೂಗಡ್ಡೆ ಬೆಳೆಯುವುದಕ್ಕಿಂತ ಅತಿ ಕಡಿಮೆ ವೆಚ್ಚದ ಕ್ಯಾರೆಟ್‌ನತ್ತ ಎಲ್ಲಾ ರೈತರು ಚಿತ್ತ ಹರಿಸಿದ್ದು, ಸಹಜವಾಗಿಯೇ ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಸದ್ಯ ಕ್ಯಾರೆಟ್‌ ಬೆಳೆದಿರುವ ರೈತರಿಗೆ ಕ್ಯಾರೆಟ್‌ ಬೆಲೆ ಏರಿಕೆಯಿಂದ ವರಮಹಾಲಕ್ಷ್ಮೀ ಮನೆಗೆ ಬರುವಂತಾಗಿದೆ.

100 ರೂ. ಗಡಿ ದಾಟಿದರೂ ಅಚ್ಚರಿಯಿಲ್ಲ: ಸದ್ಯ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಕ್ಯಾರೆಟ್‌ ಕಿಲೋ 80 ರಿಂದ 90 ರೂ, ವರೆಗೂ ಮಾರಾಟಗೊಳ್ಳುತ್ತಿದ್ದು, ಅದರ ಬೆಲೆ 100 ರೂ. ಗಡಿ ದಾಟಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಎಪಿಎಂಸಿ ಮಾರುಕಟ್ಟೆ ತರಕಾರಿ ವ್ಯಾಪಾರಿ ಬೈರಾರೆಡ್ಡಿ “ಉದಯವಾಣಿ’ಗೆ ತಿಳಿಸಿದರು.

ಹೆಚ್ಚು ಬೇಡಿಕೆ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಾಗೂ ಬರದಿಂದ ಕೊಳವೆ ಬಾವಿಗಳು ಸಂಪೂರ್ಣ ಕೈ ಕೊಟ್ಟಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕ್ಯಾರೆಟ್‌ ಬೆಳೆದಿಲ್ಲ. ಜೊತೆಗೆ ಮಹಾರಾಷ್ಟ್ರ, ಪುಣೆ ಮತ್ತಿತರ ಕಡೆಗಳಲ್ಲಿ ವ್ಯಾಪಕ ಮಳೆಯಿಂದ ಕ್ಯಾರೆಟ್‌ ಕೈ ಕೊಟ್ಟು ಮಾರುಕಟ್ಟೆ ಪ್ರವೇಶಿಸದ ಕಾರಣ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಬರುವ ಕ್ಯಾರೆಟ್‌ಗೆ ಹೆಚ್ಚು ಬೇಡಿಕೆ ಬರುತ್ತಿದೆ.

Advertisement

ಹೀಗಾಗಿ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್‌ 90 ರೂ.ಗೆ ಮಾರಾಟಗೊಳ್ಳುತ್ತಿದ್ದು, ಚಿಲ್ಲರೆಯಾಗಿ ಕೆ.ಜಿ 100 ರೂ.ಗೆ ಮಾರಾಟಗೊಳ್ಳುತ್ತಿದೆ. ಮತ್ತೂಂದೆಡೆ ಶ್ರಾವಣ ಮಾಸ ಆರಂಭಗೊಂಡಿರುವ ಪರಿಣಾಮ ಶುಭ ಕಾರ್ಯಗಳು ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಕ್ಯಾರೆಟ್‌ ಬಾರದ ಕಾರಣ ಬರುವ ಅಲ್ಪಸ್ಪಲ್ಪ ಕ್ಯಾರೆಟ್‌ಗೆ ಹೆಚ್ಚು ಬೇಡಿಕೆ ಉಂಟಾಗಿ ದರ ಹೆಚ್ಚಾಗಿದೆ ಎಂದು ಚಿಕ್ಕಬಳ್ಳಾಪುರದ ಎಪಿಎಂಸಿ ವರ್ತಕರು ಹೇಳುತ್ತಾರೆ.

ಹೋಟೆಲ್‌ ಮಾಲೀಕರ ಪರದಾಟ: ಕ್ಯಾರೆಟ್‌ ಬೆಲೆ ಹೆಚ್ಚಳ ಸಹಜವಾಗಿಯೇ ಹೋಟೆಲ್‌ ಮಾಲೀಕರನ್ನು ಕಂಗೆಡಿಸಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾರೆಟ್‌ ಪ್ರತಿಯೊಂದು ಆಹಾರ ಪದಾರ್ಥಕ್ಕೂ ಅದರಲ್ಲೂ ಹೋಟೆಲ್‌ಗ‌ಳಲ್ಲಿ ತಯಾರಿಸುವ ದೋಸೆ, ರವೆ ಇಡ್ಲಿ, ಸಾಂಬಾರ್‌ ಹಾಗೂ ವಿವಿಧ ತರಹೇವಾರಿ ಪಲ್ಯಗಳಿಗೆ ಕ್ಯಾರೆಟ್‌ ಬಳಸುವುದು ಹೆಚ್ಚಾಗಿರುವುದರಿಂದ ಹೋಟೆಲ್‌ ಮಾಲೀಕರು ಬೆಲೆ ಹೆಚ್ಚಳಕ್ಕೆ ಹೈರಾಣಾಗಿದ್ದಾರೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮದುವೆ, ನಾಮಕರಣ ಮತ್ತಿತರ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಗ್ರಾಹಕರಿಗೆ ಕ್ಯಾರೆಟ್‌ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮಹಾರಾಷ್ಟ್ರ, ಪುಣೆಯಲ್ಲಿ ವಿಪರೀತ ಮಳೆಯಾಗುತ್ತಿದೆ. ಹೀಗಾಗಿ ಅಲ್ಲಿನ ಕ್ಯಾರೆಟ್‌ ಬೆಳೆ ಸಂಪೂರ್ಣ ನಾಶವಾಗಿದ್ದು, ಮಾರುಕಟ್ಟೆ ಬರುತ್ತಿಲ್ಲವಾದ್ದರಿಂದ ಜಿಲ್ಲೆಯ ಕ್ಯಾರೆಟ್‌ಗೆ ಬೇಡಿಕೆ ಬಂದಿದೆ. ಇದೇ ಮೊದಲ ಬಾರಿಗೆ ಕಿಲೋ ಕ್ಯಾರೆಟ್‌ 80, 90, 100 ರೂ. ವರೆಗೂ ಮಾರಾಟ ಮಾಡಲಾಗುತ್ತಿದೆ. ಮಳೆಗಾಲದ ಎಫೆಕ್ಟ್ನಿಂದ ಕ್ಯಾರೆಟ್‌ ಬೆಲೆ ಹೆಚ್ಚಾಗಿದೆ.
-ನಾಗರಾಜ್‌, ಎಪಿಎಂಸಿ ವರ್ತಕರು, ಚಿಕ್ಕಬಳ್ಳಾಪುರ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next