ದೇವನಹಳ್ಳಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಪ್ರಗತಿ ಮಾದರಿ ಗ್ರಾಮಗಳ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಮಾದರಿ ಗ್ರಾಮದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾರಹಳ್ಳಿ ಗ್ರಾಮದ ಕಾಲೋನಿಗಳ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ 90 ಲಕ್ಷ ರೂ. ಬಿಡುಗಡೆಯಾಗಿದೆ. ಕಾರಹಳ್ಳಿ ಸೇರಿದಂತೆ 6 ಗ್ರಾಮಗಳನ್ನು ಪ್ರಗತಿ ಮಾದರಿ ಗ್ರಾಮಗಳನ್ನಾಗಿ ಮಾಡಲಾಗುತ್ತಿದೆ ಎಂದರು. ಕೊಯಿರಾ ಗ್ರಾಪಂ ವ್ಯಾಪ್ತಿಯ ರಸ್ತೆಗಳಿಗೆ 50ಲಕ್ಷ ರೂ., ದೊಡ್ಡಬಳ್ಳಾಪುರದ ಲಿಂಕ್ ರಸ್ತೆ, ದೊಡ್ಡಚೀಮನಹಳ್ಳಿ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ 70 ಲಕ್ಷ ರೂ., ವಿಶ್ವನಾಥಪುರ, ರಬ್ಬನಹಳ್ಳಿ, ಚಿಕ್ಕತತ್ತಮಂಗಲ, ಚಂದೇನಹಳ್ಳಿ ಸೇರಿದಂತೆ ತೋಬಗೆರೆ ಹೋಬಳಿ ಬಂಡೇಪಾಳ್ಯ ಗ್ರಾಮದಲ್ಲಿಯೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುವುದೆಂದು ಹೇಳಿದರು.
ಮೈತ್ರಿ ಸರಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ. ಒಂದು ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಾಗುವುದು. ತಾಲೂಕಿನಾದ್ಯಂತ ಈಗಾಗಲೇ 7 ಹಳ್ಳಿಗಳಿಗೆ ಪ್ರಗತಿ ಕಾಲೋನಿ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ಜನರ ಸಮಸ್ಯೆಗಳನ್ನು ಈಗಾಗಲೇ ಆಲಿಸಿದ್ದು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಭಾಗದ ಮುಖಂಡರ ಸಹಕಾರದೊಂದಿಗೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತಿವೆ. ಇದೇ ರೀತಿ ವಿವಿಧ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ. ಜನರ ಸುಗಮ ಸಂಚಾರಕ್ಕಾಗಿ ರಸ್ತೆ ಕಾಮಗಾರಿಗೆ ಒತ್ತು ನೀಡಲಾಗಿದೆ ಎಂದರು.
ಈ ವೇಳೆ ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ತಾಪಂ ಸದಸ್ಯ ಶ್ರೀನಿವಾಸ್, ಕಾರಹಳ್ಳಿ ಗ್ರಾಪಂ ಅಧ್ಯಕ್ಷ ದೇವರಾಜ್, ಮಾಜಿ ಅಧ್ಯಕ್ಷ ರಾಜೇಂದ್ರ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಪಿಡಿಒ ಬೀರೇಶ್, ಎಂಪಿಸಿಎಸ್ ಅಧ್ಯಕ್ಷ ಬೈರೇಗೌಡ, ತಾಪಂ ಸದಸ್ಯರು, ಮುಖಂಡರು, ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.