ಭಾಲ್ಕಿ: ನಾಲ್ಕು ವರ್ಷಗಳ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜನರಿಗೆ ನೀಡಿದ ಶೇ.90ರಷ್ಟು ಭರವಸೆ ಈಡೇರಿಸಲಾಗಿದೆ. ಉಳಿದ ಭರವಸೆಗಳೂ ಶೀಘ್ರವೇ ಈಡೇರಲಿವೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು. ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕಾಂಗ್ರೆಸ್ ಪಕ್ಷ ತತ್ವಸಿದ್ಧಾಂತದ ಮೇಲೆ ನಡೆಯುತ್ತಿದ್ದು, ಪಕ್ಷಕ್ಕೆ ಸುಮಾರು 132 ವರ್ಷಗಳ ಇತಿಹಾಸ, ಹಿನ್ನೆಲೆ ಇದೆ. ಆದರೆ ಬಿಜೆಪಿಯವರು ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಸರಕಾರ ಹೆಚ್ಚು ಕೆಲಸ ಕಾರ್ಯ ಮಾಡಿದ್ದರೂ ಪ್ರಚಾರದ ಕೊರತೆಯಿಂದ ನಾವು ಹಿಂದೆ ಬಿದ್ದಿದ್ದೇವೆ. ಹಾಗಾಗಿ ಈಗಿನಿಂದಲೇ ಕಾಂಗ್ರೆಸ್ ಪಕ್ಷ ಬೂತ್‌ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಬೇಕು. ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ಪರಿಚಯಿಸಿ ಜಿಲ್ಲೆಯ 6 ವಿಧಾನಸಭೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಜನರ ನೀರಿಕ್ಷೆಗಳನ್ನು ಪೂರೈಸಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದು, ಸಚಿವರು ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಬಿಜೆಪಿ ಸಾಧನೆಯಾಗಿದೆ. ಸುಳ್ಳು ಹೇಳುವುದರಲ್ಲಿ ಬಿಜೆಪಿ ನಾಯಕರು ನಿಸ್ಸಿಮ್ಮರು ಎಂದು ವ್ಯಂಗ್ಯವಾಡಿದರು. ಕೆಆರ್‌ಡಿಎಲ್ ಅಧ್ಯಕ್ಷ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರಕಾರದ ಆಡಳಿತದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ 1 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿಪರ ಕೆಲಸಗಳು ಪ್ರಗತಿಯಲ್ಲಿವೆ. ಆದರೆ ಪಕ್ಷಕ್ಕೆ ಪ್ರಚಾರದ ಕೊರತೆ ಎದುರಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಖಾಜಿ ಅರ್ಷದ ಅಲಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಹೈ.ಕ. ಉಸ್ತುವಾರಿ ಚೈಲಾಜನಾಥ ಸಾಕೆ, ಓಬಯದುಲ್ಲಾ ಶರೀಫ್, ರಾಠೊಡ್, ಎಚ್.ಪಿ.ಮುರಾರಿ, ಬಸವರಾಜ ಜಾಬಶೆಟ್ಟೆ, ಶಂಕರ ದೊಡ್ಡಿ, ಆನಂದ ದೇವಪ್ಪ, ತಾಪಂ ಅಧ್ಯಕ್ಷೆ ರೇಖಾ ಪಾಟೀಲ, ಹುಮನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಇದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ ನಿರೂಪಿಸಿದರು.