ಒಂದು ಕಡೆ ಕಾಮಿಡಿ, ಮತ್ತೂಂದು ಕಡೆ ಥ್ರಿಲ್ಲರ್, ಇನ್ನೊಂದು ಕಡೆ ಯೋಚಿಸಬೇಕಾ ದಂತಹ ಸಂದೇಶ… ಇವೆಲ್ಲವನ್ನು ಒಟ್ಟು ಸೇರಿಸಿ ದರೆ ಸಿಗುವುದೇ “90 ಬಿಡಿ ಮನೀಗ್ ನಡಿ’.
ಈ ವಾರ ತೆರೆಕಂಡಿರುವ ಈ ಚಿತ್ರ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು, ಕಾಮಿಡಿ ಕ್ರೈಂ ಥ್ರಿಲ್ಲರ್ ಜಾನರ್‌ಗೆ ಸೇರಿದೆ. ಕುಡಿತದಿಂದ ಬದುಕು ನಾಶವಾಗುತ್ತದೆ ಎಂಬ ಮೂಲ ಸಂದೇಶದೊಂದಿಗೆ ಬಂದ ಈ ಸಿನಿಮಾದಲ್ಲಿ ಹಾಸ್ಯಕ್ಕೇನು ಕೊರತೆಯಿಲ್ಲ. ಆ ಮಟ್ಟಿಗೆ ಕಾಮಿಡಿ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಎನ್ನಬಹುದು.
ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಇಡೀ ಸಿನಿಮಾ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಸಾಗುತ್ತದೆ. ಈ ನಾಲ್ಕು ಪಾತ್ರಗಳಿಗೂ ಒಂದೊಂದು ಹಿನ್ನೆಲೆ ಇದೆ. ಮೊದಲರ್ಧದಲ್ಲಿ ಪಾತ್ರ ಪರಿಚಯ, ಅವರ ನೋವು, ಯಾತನೆಯನ್ನು ಕಾಮಿಡಿ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಉತ್ತರ ಕರ್ನಾಟಕದ ಭಾಷೆ, ಬೈಗುಳ, ಪರಿಸರ ಮೂಲಕ ಸಿನಿಮಾ ಸಾಗುತ್ತದೆ. ಆರಂಭದಲ್ಲಿ ನಗಿಸುತ್ತಲೇ ಸಾಗುವ ಸಿನಿಮಾ ಒಂದು ಹಂತದಲ್ಲಿ ಗಂಭೀರವಾಗುತ್ತಾ ಕ್ರೈಂ ಥ್ರಿಲ್ಲರ್‌ಗೆ ವಾಲುತ್ತದೆ. ಅಲ್ಲಿಂದ ಒಂದು ಕುತೂಹಲಕ್ಕೆ ನಾಂದಿಯಾಡುವ ಸಿನಿಮಾ ಕ್ಲೈಮ್ಯಾಕ್ಸ್‌ವರೆಗೂ ಆ ಕುತೂಹಲವನ್ನು ಕಾಯ್ದಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ಮಟ್ಟಿಗೆ “90 ಬಿಡಿ ಮನಿಗ್ ನಡಿ’ ಸಿನಿಮಾ ಒಂದು ಪ್ರಯತ್ನವಾಗಿ ಮೆಚ್ಚಬಹುದು.
ಇದನ್ನೂ ಓದಿ: Bigg Boss ಮನೆಯಲ್ಲಿ ʼಲಿಪ್ ಲಾಕ್ ಕಿಸ್ʼ ಚಾಲೆಂಜ್: ಮುತ್ತಿನ ಬಳಿಕ ನಡೆಯಿತು ವಾಗ್ವಾದ
ಅಗರಬತ್ತಿ ಮಾರಿಕೊಂಡು, ತನ್ನ ಪಾಡಿಗೆ ಖುಷಿ ಖುಷಿಯಾಗಿರುವ ಒಬ್ಬ ವ್ಯಕ್ತಿ ಮುಂದೆ ಹೇಗೆ ಅನೇಕರಿಗೆ ಸಹಾಯವಾಗುತ್ತಾನೆ, ಕೆಲವು ರಹಸ್ಯಗಳನ್ನು ಹೇಗೆ ಬಿಡಿಸುತ್ತಾನೆ ಎಂಬುದು ಕೂಡಾ ಈ ಸಿನಿಮಾದ ಹೈಲೈಟ್.
ವೈಜನಾಥ್ ಬಿರಾದಾರ್ ಅವರ 500ನೇ ಸಿನಿಮಾವಿದು. ಈ ಚಿತ್ರದ ನಾಯಕ ಕೂಡಾ ಅವರೇ. ಫೈಟ್, ಕಲರ್‌ಫುಲ್ ಹಾಡು, ಪಂಚಿಂಗ್ ಡೈಲಾಗ್ ಎಲ್ಲವೂ ಇದೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಬಿರಾದಾರ್. ಹಾಡಿನಲ್ಲೂ ಸಖತ್ ಸ್ಟೆಪ್ ಹಾಕಿ ರಂಜಿಸಿದ್ದಾರೆ. ಉಳಿದಂತೆ ಕರಿಸುಬ್ಬು ಸೇರಿದಂತೆ ಇತರರು ನಟಿಸಿದ್ದಾರೆ.
-ರವಿ ರೈ