ಹಿರಿಯ ನಟ ವೈಜನಾಥ್ ಬಿರಾದಾರ್ ಅಭಿನಯದ 500ನೇ ಚಿತ್ರ “90 ಬಿಡಿ ಮನೀಗ್ ನಡಿ’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದು, ರತ್ನಮಾಲ ಬಾದರದಿನ್ನಿ ನಿರ್ಮಾಣ ಮಾಡಿದ್ದಾರೆ.
“ಮೊದಲು ನಮ್ಮ ಚಿತ್ರದ ಟೈಟಲ್ 90 ಹೊಡಿ ಮನೀಗ್ ನಡಿ ಎಂದು ಇಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಟೈಟಲ್ ಗೆ ಒಪ್ಪಲಿಲ್ಲ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನು 90 ಬಿಡಿ ಮನೀಗ್ ನಡಿ ಎಂದು ಬದಲಿಸಲಾಯಿತು. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನ ಗೆದ್ದಿದೆ. ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ತಿಂಗಳ ಕೊನೆಗೆ ಅಥವಾ ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ’ ಎಂದು ವಿವರ ನೀಡಿದರು ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ.
ಇದನ್ನೂ ಓದಿ:ಅಕ್ಕಿ ಕೊಡುವುದು ಒಂದೆರಡು ತಿಂಗಳು ತಡವಾದರೆ ಆಂತದೇನ್ ಆಗಲ್ಲ: ಸತೀಶ್ ಜಾರಕಿಹೊಳಿ
ಚಿತ್ರದ ಬಗ್ಗೆ ಮಾತನಾಡುವ ಹಿರಿಯ ನಟ ಬಿರಾದಾರ್, “ನನ್ನ ರಂಗಭೂಮಿ ಹಾಗೂ ಸಿನಿಪಯಣಕ್ಕೆ 50 ವರ್ಷ ತುಂಬಿದೆ. ಇದು ನನ್ನ 500ನೇ ಚಿತ್ರ. ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ’ ಎಂದರು.
ಚಿತ್ರಕ್ಕೆ “ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ…’ ಎಂಬ ಟ್ಯಾಗ್‌ಲೈನ್ ಇದೆ. ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತವಿದ್ದು, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಅವರ ಸಂಗೀತ ನಿರ್ದೇಶನವಿದೆ.