ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಬೆಚ್ಚಗೆ ಮಲಗಿದವರು, ಈಗ ನೆಲ ಸಮವಾದ ತಮ್ಮ ಮನೆಯ ಕಟ್ಟಡವನ್ನು ನೋಡಿ, ದುಃಖಿತರಾಗಿದ್ದಾರೆ.
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಟರ್ಕಿ , ಸಿರಿಯಾದ ಸಹಾಯಕ್ಕೆ ಮುಂದೆ ಬಂದಿವೆ. ರಕ್ಷಣಾ ಸಾಮಾಗ್ರಿ, ಸೇನೆ, ಬಟ್ಟೆ, ಆಹಾರವನ್ನು ಪೊರೈಸುತ್ತಿದೆ. 9 ವರ್ಷದ ಪುಟ್ಟ ಬಾಲಕೊನೊಬ್ಬ ತನ್ನ ಬಳಿಯಿದ್ದ ಹಣವನ್ನು ಭೂಕಂಪ ಪೀಡಿತ ಸಂತ್ರಸ್ತರಿಗೆ ನೀಡಿರುವುದು ಸುದ್ದಿಯಾಗಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ಉಂಟಾದ ಭೂಕಂಪದಲ್ಲಿ ಬದುಕುಳಿದ ಆಲ್ಪರ್ಸ್ಲಾನ್ ಎಫೆ ಡೆಮಿರ್ ಎಂಬ ಬಾಲಕ ತನ್ನ ಪಿಗ್ಗಿ ಬ್ಯಾಂಕ್ ನಲ್ಲಿ ಉಳಿಸಿಟ್ಟ ಹಣವನ್ನು ಭೂಕಂಪ ಸಂತ್ರಸ್ತರ ನೆರವಿಗೆ ನೀಡಿದ್ದಾನೆ.
ಡೆಮಿರ್ ಹಾಗೂ ಆತನ ತಾಯಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಣವನ್ನು ಕೊಟ್ಟಿದ್ದಾರೆ. ಈ ವೇಳೆ ಹಣದೊಂದಿಗೆ ಬಾಲಕ ಡೆಮಿರ್, “ಭೂಕಂಪವಾದಾಗ ನನಗೆ ತುಂಬಾ ಹೆದರಿಕೆ ಆಗುತ್ತಿತ್ತು. ನಮ್ಮ ಅನೇಕ ನಗರಗಳಲ್ಲಿ ಭೂಕಂಪನದ ಬಗ್ಗೆ ಕೇಳಿದಾಗ ನನಗೆ ಅದೇ ಭಯವಿತ್ತು. ಹಾಗಾಗಿಯೇ ಹಿರಿಯರು ಕೊಟ್ಟ ಪಾಕೆಟ್ ಮನಿಯನ್ನು ಅಲ್ಲಿನ ಮಕ್ಕಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. “ನಾನು ಇಲ್ಲಿ ಚಾಕಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳಿಗೆ ಚಳಿ, ಹಸಿವು ಇರಬಾರದು. ನನ್ನ ಬಟ್ಟೆ ಮತ್ತು ಆಟಿಕೆಗಳನ್ನು ಅಲ್ಲಿನ ಮಕ್ಕಳಿಗೆ ಕಳುಹಿಸುತ್ತೇನೆ” ಎಂದು ಬಾಲಕ ಪತ್ರವನ್ನು ಬರೆದಿದ್ದಾರೆ.
ಸದ್ಯ ಡೆಮಿರ್ ಅವರ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ಮಾನವೀಯ ಗುಣವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಭೂಕಂಪದಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಇದುವರೆಗೆ 28 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.