Advertisement

R.R.ನಗರ ವೋಟರ್‌ ಐಡಿ ಪ್ರಕರಣ;ಬಿಜೆಪಿ,ಕಾಂಗ್ರೆಸ್‌ ಆರೋಪ-ಪ್ರತ್ಯಾರೋಪ

09:29 AM May 09, 2018 | |

ಬೆಂಗಳೂರು: ಚುನಾವಣೆಗೆ 3 ದಿನಗಳು ಉಳಿದಿರುವಂತೆ ಸಂಚಲನ ಮೂಡಿಸಿರುವ ವಿದ್ಯಮಾನವೊಂದರಲ್ಲಿ, ಮಂಗಳವಾರ ರಾತ್ರಿ ಆರ್‌.ಆರ್‌.ನಗರ ಕ್ಷೇತ್ರದಲ್ಲಿ 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು ಭಾರೀ ಕಳವಳಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊಸ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. 

Advertisement

ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ವ್ಯೂ ಅಪಾರ್ಟ್‌ ಮೆಂಟ್ಸ್‌ ಮೇಲೆ ಚುನಾವಣಾ ವಿಚಕ್ಷಣಾ ದಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ 9,746 ವೋಟರ್‌ ಐಡಿಗಳು ಬಂಡಲ್‌ಗ‌ಳ ರೂಪದಲ್ಲಿ, ಜೊತೆಗೆ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಗುರುತಿನ ಚೀಟಿಗಳಲ್ಲಿ ಅಸಲಿ ಮತದಾರರ ಚೀಟಿಗಳೂ ಇದ್ದವು.

ಮಂಜುಳಾ ನಂಜಾಮರಿ ಎನ್ನುವವರಿಗೆ ಸೇರಿದ ಫ್ಲ್ಯಾಟ್‌ ಇದಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ರಾತ್ರಿಯೀಡಿ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಇಳಿದಿವೆ. ಒಂದಾದ ಮೇಲೆ ಇನ್ನೊಂದು ಸುದ್ದಿಗೋಷ್ಠಿಗಳ ಮೂಲಕ ಪರಸ್ಪರ ವಾಗ್ಧಾಳಿ ನಡೆಸಿದ್ದಾರೆ.

ಆರ್‌.ಆರ್‌.ನರಗದಲ್ಲಿ  ಕಾಂಗ್ರೆಸ್‌ ಶಾಸಕ ಮುನಿರತ್ನ ಅವರು ಸ್ಪರ್ಧಿಸುತ್ತಿದ್ದು ಬಿಜೆಪಿ ಅವರ ಮೇಲೆ ಆರೋಪ ಹೊರಿಸಿದೆ. ಮಂಜುಳಾ ನಂಜಾಮರಿ ಅವರು ಕಾಂಗ್ರೆಸ್‌ ಕಾರ್ಯಕರ್ತರು , ಕಾಂಗ್ರೆಸ್‌ ಅಕ್ರಮಗಳ ಮೂಲಕ ಗೆಲ್ಲಲು ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ಕೂಡ ನಂಜಾಮರಿ ಅವರು ಬಿಜೆಪಿಯಲ್ಲಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. 

ಚುನಾವಣಾ ಆಯೋಗ ಸುದ್ದಿಗೋಷ್ಠಿ, ಕ್ಷಿಪ್ರ ತನಿಖೆ 

Advertisement

ಈ ಸಂಬಂಧ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ಅವರು ತಡರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದು, 24 ಗಂಟೆಗಳ ಒಳಗೆ ವಿವರಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಸ್ಥಳೀಯ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವೂ ಪತ್ತೆಯಾಗಿದೆ ಎಂದು ಸಂಜೀವ್‌ಕುಮಾರ್‌ ಹೇಳಿದ್ದಾರೆ.

ಸ್ಥಳಕ್ಕೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರ ನಾಯಕರು ಭೇಟಿ ನೀಡಿದ್ದಾರೆ.

ಕೃತ್ಯದ ಹಿಂದೆ ಆರ್‌.ಆರ್‌.ನಗರ ಶಾಸಕ ಮುನಿರತ್ನ ನಾಯ್ಡು ಕೈವಾಡವಿದೆ ಎಂದು ವಾಗ್ಧಾಳಿ ನಡೆಸಿದ ಡಿ.ವಿ.ಸದಾನಂದ ಗೌಡ, ಇಂತಹ ಮೆಗಾ ಹಗರಣವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ನಕಲಿ ಗುರುತಿನ ಚೀಟಿಗಳ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ  ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳದಲ್ಲಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಮತ್ತು ಯಾವ ರೀತಿಯಲ್ಲಿ ಈ ಅಕ್ರಮ ನಡೆದಿದೆ ಎನ್ನುವ ಕುರಿತು ವರದಿ ನೀಡಲಿದ್ದು ಆ ಬಗ್ಗೆ ಎದುರು ನೋಡಲಾಗುತ್ತಿದೆ. 

ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದು ಅವರ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಗರಣದ ಹಿಂದೆ ಯಾಕ ಕೈವಾಡವಿದೆ, ಆರ್‌.ಆರ್‌ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಲಿದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ. 

ಅಮಿತ್‌ ಶಾ ತುರ್ತು ಸಭೆ
ವೋಟರ್‌ಐಟಿ ಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು  ತಡರಾತ್ರಿ ತುರ್ತು ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next