ಕೋಲ್ಕತಾ: ವಿಪಕ್ಷಗಳ ಒಕ್ಕೂಟವಾದ ಮಹಾಘಟಬಂಧನದಲ್ಲಿ 9 ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಮಹಾಘಟಬಂಧನವು ಕೇವಲ ದುರಾಸೆಯಿಂದಲೇ ಸೃಷ್ಟಿಯಾದ ಒಕ್ಕೂಟ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆ ಕ್ಯಾಂಪೇನ್‌ಗೆ ಮಂಗಳವಾರ ಚಾಲನೆ ನೀಡಿದ ಅವರು, 20-25 ನಾಯಕರನ್ನು ಒಂದೇ ವೇದಿ ಕೆಗೆ ಕರೆತಂದರೆ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಪಕ್ಷಗಳು ಭಾವಿಸಿವೆ. ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದಿದ್ದಾರೆ.
ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೆಲವೇ ದಿನಗಳ ಹಿಂದೆ ಬೃಹತ್ ರ್ಯಾಲಿ ನಡೆಸಲಾಗಿತ್ತು. ಇದರಲ್ಲಿ 23 ನಾಯಕರು ಹಾಜರಿದ್ದರು. ಈ ಪೈಕಿ 9 ನಾಯಕರು ಪ್ರಧಾನಿ ಅಭ್ಯರ್ಥಿಗಳಾಗಿದ್ದಾರೆ. ಆದರೆ ನಮಗೆ ಒಬ್ಬರೇ ಪ್ರಧಾನಿ ಎಂದು ಶಾ ಹೇಳಿದ್ದಾರೆ. ಮಹಾಘಟ ಬಂಧನಕ್ಕೆ ದುರಾಸೆಯೇ ಮೂಲ. ಅವರಿಗೆ ಮೋದಿಯಿಂದ ಅಧಿಕಾರ ಕಿತ್ತೂಗೆಯಬೇಕಿದೆ. ಆದರೆ ನಮಗೆ ದೇಶದಿಂದ ಬಡತನ ಮತ್ತು ಭ್ರಷ್ಟಾಚಾರವನ್ನು ನಿವಾರಿಸಬೇಕಿದೆ ಎಂದು ಶಾ ಹೇಳಿದ್ದಾರೆ. ರಾಜ್ಯದಲ್ಲಿ ಮಮತಾ ನೇತೃತ್ವದ ಟಿಎಂಸಿ ಸರ್ಕಾರವನ್ನು ಕಿತ್ತೂಗೆಯಿರಿ ಎಂದು ಜನರಿಗೆ ಶಾ ಕರೆ ನೀಡಿದ್ದಾರೆ. ಅಲ್ಲದೆ, ಮೋದಿ ಸರ್ಕಾರವು ಪೌರತ್ವ ಮಸೂದೆಯನ್ನು ಮಂಡಿಸಿದ್ದು, ಮಮತಾ ಇದಕ್ಕೆ ಬೆಂಬಲ ನೀಡುತ್ತಾರೆಯೇ, ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜನರನ್ನು ತಡೆಯುವ ಪ್ರಯತ್ನ:ನನ್ನ ರ್ಯಾಲಿಗೆ ಬರದಂತೆ ಜನರನ್ನು ತಡೆಯಲು ಮಮತಾ ಬ್ಯಾನರ್ಜಿ ಪ್ರಯತ್ನಿಸಿದ್ದಾರೆ ಎಂದು ಶಾ ಆರೋಪಿಸಿದ್ದಾರೆ. ರ್ಯಾಲಿಗೆ ಆಗಮಿಸುತ್ತಿದ್ದ ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಮಮತಾ ಯಾಕೆ ಹೆದರಿದ್ದಾರೆ? ತನ್ನನ್ನು ಹೋರಾಟಗಾರ್ತಿ ಎಂದು ಮಮತಾ ಕರೆದು ಕೊಳ್ಳುತ್ತಿದ್ದಾರೆ. ಹಾಗಾದರೆ ಹೆದರಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ, ಭಯವಾಗಿರುವುದು ನಮಗಲ್ಲ, ನಿಮಗೆ. ಹೀಗಾಗಿ ಹತಾಶೆಯಿಂದ ಮಾತನಾಡುತ್ತಿದ್ದೀರಿ ಎಂದಿದೆ.
ವಿಪಕ್ಷಗಳ ವಿರುದ್ಧ ಪ.ಬಂಗಾಳದಲ್ಲಿ ಅಮೀತ್ ಶಾ ಟೀಕೆ
ಲೋಕಸಭೆ ಚುನಾವಣಾ ಪ್ರಚಾರ ರ್ಯಾಲಿ ಉದ್ಘಾಟನೆ