ಬೆಂಗಳೂರು: ರಾಜಧಾನಿಯ ಅಕ್ರಮ ಜಾಹೀರಾತು ಫಲಕ ಹಗರಣದಲ್ಲಿ 9 ಮಂದಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿರುವುದು ಲೋಕಾಯುಕ್ತ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿತ ಆ ಅಧಿಕಾರಿಗಳನ್ನು ವಿಚಾರಣೆ ನಡೆಸಲು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ತನಿಖಾಧಿಕಾರಿಗಳು ರಾಜ್ಯಸರ್ಕಾರಕ್ಕೆ ಪತ್ರಬರೆದಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪತ್ರ ಕಳುಹಿಸಿಕೊಡಲಾಗಿದ್ದು, ಇದುವೆರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಲೋಕಾಯುಕ್ತ ಉನ್ನತ ಮೂಲಗಳು ತಿಳಿಸಿವೆ. ಕಳೆದ 10 ವರ್ಷಗಳಲ್ಲಿ ನಗರದಲ್ಲಿ ನಡೆದ ಅಕ್ರಮ ಜಾಹೀರಾತು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಿದಾಗ, ಹಲವು ಮಂದಿ ಪಾಲಿಕೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ.
ಹೀಗಾಗಿ ಅಂತಹ ಅಧಿಕಾರಿಗಳ ಪಟ್ಟಿ ಸಿದ್ಧಮಾಡಿಕೊಂಡು ವಿಚಾರಣೆ ನಡೆಸುವ ಸಲುವಾಗಿ ಪ್ರಾಸಿಕ್ಯೂಶನ್ ಅನುಮತಿ ಕೋರಲಾಗಿದೆ. ಉಳಿದಂತೆ ಹಲವು ಮಂದಿ ಪಾಲಿಕೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆ ವಿಳಂಬಕ್ಕೆ ಅಸಮಾಧಾನ!: ಮತ್ತೂಂದೆಡೆ ಪ್ರಕರಣದ ತನಿಖೆ ಆರಂಭವಾಗಿ ಎರಡೂವರೆ ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದೇ, ಕೇವಲ ನೋಟಿಸ್ ಹಾಗೂ ವಿಚಾರಣೆಗೆ ಸೀಮಿತಗೊಳಿಸಿರುವ ಪೊಲೀಸರ ಕಾರ್ಯವಿಧಾನಕ್ಕೆ ದೂರುದಾರರಿಂದ ಅಸಮಾಧಾನ ವ್ಯಕ್ತವಾಗಿದೆ.
ಪ್ರಕರಣದ ತನಿಖೆ ಪೂರ್ಣಗೊಳಿಸಿ ಶೀಘ್ರವಾಗಿ ತಪ್ಪಿತಸ್ಥರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಲೋಕಾಯುಕ್ತ ಹಾಗೂ ಹೈಕೋರ್ಟ್‌ನ ಆದೇಶವಿದೆ. ಹೀಗಿದ್ದರೂ ನೂರಾರು ಕೋಟಿ. ರೂಗಳ ಅಕ್ರಮ ಪ್ರಕರಣದ ತನಿಖೆ ಕುರಿತ ಮಧ್ಯಂತರ ದೋಷಾರೋಪ ಪಟ್ಟಿಯನ್ನೇ ಸಲ್ಲಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರ ವಿಳಂಬದಿಂದ ಹಗರಣದಲ್ಲಿ ಭಾಗಿಯಾಗಿರುವವರು ನಿರುಮ್ಮಳವಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪಾಲನೆಯಾಗದ 2015ರ ಆದೇಶ: ನಗರದಲ್ಲಿ ಅಕ್ರಮ ಜಾಹೀರಾತು ಫಲಕಗಳ ಭರಾಟೆ ಸಂಬಂಧ ನಾಲ್ಕು ಪ್ರತ್ಯೇಕ ದೂರುಗಳ ವಿಚಾರಣೆ ನಡೆಸಿದ್ದ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ,ಅಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಜಾಹೀರಾತು ಮಾಫಿಯಾ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ 2015ರ ಫೆ.25ರಂದು ಆದೇಶಿಸಿದ್ದರು.