ಕಳೆದ ವಾರ (ಜು.1) ಕನ್ನಡ ಚಿತ್ರರಂಗ ನೂರು ಸಿನಿಮಾಗಳನ್ನು ಪೂರೈಸಿರೋದು ನಿಮಗೆ ಗೊತ್ತೇ ಇದೆ. ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದ ಪರಿಣಾಮ ಆರು ತಿಂಗಳಲ್ಲಿ ನೂರು ಸಿನಿಮಾಗಳು ಅದೃಷ್ಟ ಪರೀಕ್ಷಿಸಿಕೊಂಡಿವೆ. ಈಗ ಮತ್ತಷ್ಟು ಚಿತ್ರಗಳು ಬಿಡುಗಡೆಗೆ ಮುಂದಾಗಿವೆ. ಅದರಲ್ಲೂ ಈ ವಾರ (ಜು.8) ಬರೋಬ್ಬರಿ 9 ಸಿನಿಮಾಗಳು ತೆರೆಕಾಣುವ ಮೂಲಕ ಚಿತ್ರಮಂದಿರಗಳು ರಂಗೇರಲಿವೆ.
“ವೆಡ್ಡಿಂಗ್ ಗಿಫ್ಟ್’, “ತೂತು ಮಡಿಕೆ’, “ಶುಗರ್‌ಲೆಸ್’, “ನಮ್ಮ ಹುಡುಗರು’, “ಗಿರ್ಕಿ’, “ಹೋಪ್’, “ಧೋನಿ’, “ಚೋಟಾ ಬಾಂಬೆ’, “ಅಂಗೈಲಿ ಅಕ್ಷರ’ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ. ಈ ಪಟ್ಟಿಗೆ ಇನ್ನೊಂದು ಸಿನಿಮಾ ಸೇರಿಕೊಂಡರೂ ಸಂಖ್ಯೆ 10 ಆಗುತ್ತದೆ.
ಜುಲೈ ಎರಡನೇ ವಾರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಿನಿಮಾ ಬಿಡುಗಡೆಯಾಗಲು ಕಾರಣವೇನು ಎಂದು ಕೇಳಬಹುದು. ಅದಕ್ಕೆ ಕಾರಣ ಜುಲೈ ಮೊದಲ ವಾರ ಹಾಗೂ ಜುಲೈ ಕೊನೆಯ ವಾರ! ಆಶ್ಚರ್ಯವಾದರೂ ಸತ್ಯ.
ಜುಲೈ ಮೊದಲನೇ ವಾರದಲ್ಲಿ ಶಿವರಾಜ್‌ಕುಮಾರ್ ಅವರ “ಬೈರಾಗಿ’ ಚಿತ್ರ ತೆರೆಕಂಡಿದ್ದರಿಂದ, ಆ ಚಿತ್ರದ ಜೊತೆ ಹೆಚ್ಚು ಚಿತ್ರಗಳು ತೆರೆಕಂಡಿಲ್ಲ. ಇನ್ನು, ಜುಲೈ ಕೊನೆಯ ವಾರದಲ್ಲಿ ಸುದೀಪ್ ನಟನೆಯ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಚಿತ್ರ ತೆರೆ ಕಾಣುತ್ತಿರುವುದರಿಂದ ಆ ವಾರವೂ ಹೊಸಬರ ಸಿನಿಮಾ ಬಿಡುಗಡೆ ಕಷ್ಟ. ಈ ಎಲ್ಲಾ ಕಾರಣಗಳಿಂದಾಗಿ ಈ ವಾರ ಸಿನಿಮಾ ಬಿಡುಗಡೆಯ ಭರಾಟೆ ಜೋರಾಗಿದೆ.
ಬಿಡುಗಡೆಯಾಗುತ್ತಿರುವ 9 ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಜಾನರ್‌ಗೆ ಸೇರಿದ, ಈಗಾಗಲೇ ಟ್ರೇಲರ್, ಟೀಸರ್ ಮೂಲಕ ಗಮನ ಸೆಳೆದ ಚಿತ್ರಗಳಿವೆ. “ವೆಡ್ಡಿಂಗ್ ಗಿಫ್ಟ್’ ಕೋರ್ಟ್ ರೂಂ ಡ್ರಾಮಾವಾದರೆ, “ತೂತು ಮಡಿಕೆ’ ಥ್ರಿಲ್ಲರ್ ಚಿತ್ರ. ಇನ್ನು, “ಶುಗರ್‌ಲೆಸ್’, “ಹೋಪ್’ ಕೂಡಾ ಹೊಸ ಬಗೆಯ ಕಂಟೆಂಟ್ ಹೊಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ವಾರ ಪ್ರೇಕ್ಷಕನಿಗೆ ಸಿನಿಮಾಗಳ ಆಯ್ಕೆಗೆ ಹೆಚ್ಚಿನ ಅವಕಾಶವಿದೆ.