ಕೆ.ಆರ್.ಪುರ/ಬೆಂಗಳೂರು:ಅಪ್ರಾಪ್ತೆಯನ್ನು ಅಪಹರಿಸಿದ ಆಕೆಯ ಪ್ರೇಮಿ, ತನ್ನ ಸ್ನೇಹಿತರೊಟ್ಟಿಗೆ ಸೇರಿಕೊಂಡು, ಲಾಡ್ಜ್ ಒಂದರಲ್ಲಿ ಆಕೆಯ ಮೇಲೆ 9 ದಿನಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನ.3ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ಕುಂದಾಪುರ ಮೂಲದ ರಾಘವೇಂದ್ರ (27), ದಾವಣಗೆರೆಯ ಸಾಗರ್ (22), ಮೈಸೂರಿನ ಮಂಜುರಾಜ್ (32), ಹೋಟೆಲ್ ಮ್ಯಾನೇಜರ್ ಹಾಗೂ ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ಪಂಡಿತ್ (52) ಬಂಧಿತರು. ರಾಘವೇಂದ್ರ, ಸಾಗರ್ ಮತ್ತು ಮಂಜುರಾಜ್ ಅ.28ರಂದು ಕಾಡುಗೋಡಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಕಾಡುಗೋಡಿ ರೈಲು ನಿಲ್ದಾಣದ ಬಳಿಯ ಕ್ಲಾಸಿಕ್ ಲಾಡ್ಜ್ನಲ್ಲಿ
ಬಂಧನದಲ್ಲಿರಿಸಿ, ಸತತ 9 ದಿನಗಳ ಕಾಲ ನಾಲ್ವರೂ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತೆಯ ಮನೆಗೆ ಹೋಗುವುದಾಗಿ ಪೋಷಕರಿಗೆ ಹೇಳಿ ಅ.26ರಂದು ಮನೆಯಿಂದ ಹೋಗಿದ್ದ ಸಂತ್ರಸ್ತೆ ಮನೆಗೆ ಬಂದಿರಲಿಲ್ಲ. ಈ ನಡುವೆ ಅ.28ರಂದು ಸಂಜೆ 5 ಗಂಟೆಗೆ ಕಾಡುಗೋಡಿಯ ಟೀ ಅಂಗಡಿ ಬಳಿ ನಿಂತಿದ್ದಾಗ ಆರೋಪಿಗಳು ಅಪಹರಿಸಿದ್ದರು ಎನ್ನಲಾಗಿದೆ. ಮಗಳು ಮನೆಗೆ ಬಾರದ್ದರಿಂದ ಆತಂಕಗೊಂಡ ಪೋಷಕರು, ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದಾಗ ಅ.30ರಂದು ಕೆ.ಆರ್.ಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸಂತ್ರಸ್ತೆ ಸ್ನೇಹಿತರು, ಸಂಬಂಧಿಗಳ ವಿಚಾರಣೆ ನಡೆಸಿದ್ದಾರೆ. ಕೊನೆಗೆ ಆಕೆಯ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ಕ್ಲಾಸಿಕ್ ಲಾಡ್ಜ್ನಲ್ಲಿ ಪತ್ತೆಯಾಗಿದೆ. ಕೂಡಲೆ ದಾಳಿ ನಡೆಸಿ, ಯುವತಿಯನ್ನು ರಕ್ಷಿಸಲಾಗಿದೆ.
ಏನಿದು ಘಟನೆ?: ಒಡಿಶಾ ಮೂಲದ ಸಂತ್ರಸ್ತೆಯ ಪೋಷಕರು 15 ವರ್ಷಗಳಿಂದ ಕೆ.ಆರ್.ಪುರದಲ್ಲಿ ವಾಸವಿದ್ದು, ತಂದೆ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ಕಾಡುಗೋಡಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಸಂತ್ರಸ್ತೆ, ಕಾಲೇಜು ಬಳಿಯ ರೈಲು ನಿಲ್ದಾಣದ ಬಳಿ ಟೀ ಅಂಗಡಿ ನಡೆಸುತ್ತಿದ್ದ ರಾಘವೇಂದ್ರನನ್ನು ಪರಿಚಯಿಸಿಕೊಂಡಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ಸ್ನೇಹಿತರ ಜತೆ ಸಂತೋಷ ಕೂಟ ಏರ್ಪಡಿಸಿದ್ದೇನೆ. ನೀನೂ ಬರಬೇಕು ಎಂದು ಸಂತ್ರಸ್ತೆಗೆ ದುಂಬಾಲು ಬಿದ್ದಿದ್ದ. ಒತ್ತಾಯಕ್ಕೆ ಮಣಿದ ಅಪ್ರಾಪ್ತೆ , ಅ.28 ರಂದು ರಾತ್ರಿ 8 ಗಂಟೆಗೆ ಕ್ಲಾಸಿಕ್ ಲಾಡ್ಜ್ ಬಳಿ ಬಂದಾಗ, ಆಕೆಯನ್ನು ಲಾಡ್ಜ್ ಒಳಗೆ ಕರೆದೊಯ್ದ ಆರೋಪಿ, ಮದ್ಯ ಸೇವಿಸಿ ಅತ್ಯಾಚಾರವೆಸಗಿದ್ದಾನೆ.
ಅನಂತರ ರಾಘೇವಂದ್ರ ತನ್ನ ಟೀ ಅಂಗಡಿಯಲ್ಲಿ ಕೆಲಸ ಮಾಡುವ ಸಾಗರ್ ಮತ್ತು ಸ್ನೇಹಿತ ಮಂಜುರಾಜ್ ನನ್ನು ಕರೆಸಿಕೊಂಡಿದ್ದಾನೆ. ನಂತರ ಸಂತ್ರಸ್ತೆಯನ್ನು ಲಾಡ್ಜ್ನ ಕೊಠಡಿಯೊಂದರಲ್ಲಿ ಕೂಡಿಹಾಕಿ ಸತತ 9 ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಪೋಷಕರಿಗೆ ತಮ್ಮ ಪುತ್ರಿಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಈ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ಲಾಡ್ಜ್ ಗುತ್ತಿಗೆ ಪಡೆದಿದ್ದ ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ಪಂಡಿತ್‌ಗೆ ಮನವಿ ಮಾಡಿದ್ದ ಆರೋಪಿಗಳು, ಇದಕ್ಕೆ ಪ್ರತಿಯಾಗಿ ಸಂತ್ರಸ್ತೆಯ ಅತ್ಯಾಚಾರ ಎಸಗಲು ಅವನಿಗೂ ಅವಕಾಶ ನೀಡಿದ್ದರು. ಈ ಮಧ್ಯೆ ನ.4ರಂದು ಯುವತಿಯ ಮೊಬೈಲ್ ಸ್ವಿಚ್ ಆನ್ ಆಗಿದ್ದು, ಇದನ್ನೇ ಕಾಯುತ್ತಿದ್ದ ಪೊಲೀಸರು, ಕೂಡಲೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು.
ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ನ.6ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸಾಮೂಹಿಕ ಅತ್ಯಾಚಾರ ಸೇರಿ ಹಲವು ಸೆಕ್ಷನ್‌ಗಳು ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.