Advertisement

ಹಾಟ್‌ಸ್ಪಾಟ್‌ ಪ್ರದೇಶದಲ್ಲಿ ಒಂದೇ ದಿನ 9 ಪ್ರಕರಣ

10:21 AM May 09, 2020 | mahesh |

ಬೆಂಗಳೂರು: ನಗರದಲ್ಲಿ ಹಾಟ್‌ಸ್ಪಾಟ್‌ಗಳಾದ ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕು ಮಂದಿಗೆ ಕೋವಿಡ್ ವೈರಸ್‌ ಸೋಂಕು ದೃಢ ಪಟ್ಟಿದ್ದು, ಎರಡು ದಿವಸಗಳಲ್ಲಿ ಒಟ್ಟು 16 ಸೋಂಕು ಪತ್ತೆಯಾಗಿವೆ. ಈ ಮೂಲಕ ನಗರದ ಒಟ್ಟಾರೆ ಸೋಂಕಿತರ ಸಂಖ್ಯೆ 171ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನ 171 ಪ್ರಕರಣಗಳ ಪೈಕಿ 84 ಮಂದಿ ಗುಣಮುಖರಾಗಿದ್ದು, ಆರು ಮಂದಿ ಸಾವಿಗೀಡಾಗಿದ್ದಾರೆ. ಬಾಕಿ 81 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಶುಕ್ರವಾರ ಹೊಂಗಸಂದ್ರದಲ್ಲಿ ಬಿಹಾರಿ ಮೂಲದ ಸೋಂಕಿತ ಕಾರ್ಮಿಕ (419)ರಿಂದ ಮತ್ತೆ ಐದು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ವಾರದ ಹಿಂದೆ ಬಿಹಾರಿ ಸಂಪರ್ಕಕ್ಕೆ ಬಂದಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಅವರೆಲ್ಲರಿಗೂ ಎರಡು ಬಾರಿ ಪರೀಕ್ಷೆ ಮಾಡಲಾಗಿದ್ದು, ದ್ವಿತೀಯ ಪರೀಕ್ಷೆಯಲ್ಲಿ ಐದು ಮಂದಿಗೆ ಸೋಂಕು ತಗುಲಿರು ವುದು ಪತ್ತೆಯಾಗಿದೆ. ಇನ್ನು ಐದು ಮಂದಿ ಪೈಕಿ ಮೂವರು ಬಿಹಾರಿ ಮೂಲದ ಹಾಗೂ ಇಬ್ಬರು ತಮಿಳುನಾಡಿನ ಮೂಲದ ಕಾರ್ಮಿಕರು ಎಂದು ಮೂಲಗಳು ತಿಳಿಸಿವೆ. ಪಾದರಾಯನಪುರದಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹಜ್‌ ಭವನದಲ್ಲಿ ಕ್ವಾರಂಟೈನ್‌ ಆಗಿದ್ದ ಮೂರು ಮಂದಿಗೆ ಸೋಂಕು ಹಾಗೂ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದೆ.

191ಜನರ ಕ್ವಾರಂಟೈನ್‌ ಮುಂದುವರಿಕೆ:
ಹೊಂಗಸಂದ್ರದ ವಿದ್ಯಾಜ್ಯೋತಿ ನಗರದಲ್ಲಿ ಸೋಂಕು ಕಾಣಿಸಿಕೊಂಡವರ ಸಂಪರ್ಕದಲ್ಲಿದ್ದ ಇತರೆ ಬಿಹಾರಿಗಳ ಕ್ವಾರಂಟೈನ್‌ ಅವಧಿ ಮುಗಿದು ಅವರ ಮನೆಗೆ ಹಿಂದಿರುಗುವ ವೇಳೆ ಇಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯೇ 191ಜನರ ಕ್ವಾರಂಟೈನ್‌ ಮುಂದುವರಿ ಸಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಬಿಹಾರ ಮೂಲದ ಕಾರ್ಮಿಕರು ತಮ್ಮ ಮನೆಗೆ ತೆರಳಲು ಮುಂದಾಗಿದ್ದರು. ಆದರೆ, ಸ್ಥಳೀಯರು ಇದಕ್ಕೆ ಅವಕಾಶ ನೀಡದೆ ವಾಪಸ್‌ ಹೋಗುವಂತೆ ಆಗ್ರಹಿಸಿದರು. ಸ್ಥಳೀಯರ ಗಲಾಟೆ ಅವರು ಕಂಗಾಲಾಗಿದ್ದು, ಬಿಬಿಎಂಪಿ ರಕ್ಷಣೆ ನೀಡಿದೆ.

ಪಾದರಾಯನಪುರಕ್ಕೆ ಸಚಿವರ ಭೇಟಿ
ನಗರದ ಹಾಟ್‌ಸ್ಪಾಟ್‌ ಪಾದರಾಯನಪುರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಬಿಬಿಎಂಪಿ ಅಧಿಕಾರಿಗಳು ಪೊಲೀಸ್‌ ಅಧಿಕಾರಿಗಳು ಹಾಗೂ ಸ್ಥಳೀಯರ ಜತೆ ಸಮಾಲೋಚಿಸಿ ಸೋಂಕು ಹರಡದಂತೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ಏಳೂವರೆ ಸಾವಿರ ಮನೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವುದರಿಂದ ಸೋಂಕು ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದರು. ವಾರ್ಡ್‌ನ ವ್ಯಾಪ್ತಿಗೆ ಒಳಪಡುವ ಎಲ್ಲ ಏಳು ಸಾವಿರದ ಐನೂರು ಮನೆಗಳಲ್ಲಿರುವ ಹಿರಿಯ ನಾಗರಿಕರನ್ನು ಸೋಂಕು ತಪಾಸಣೆಗೆ ಒಳಪಡಿಸುವಂತೆ ಸೂಚನೆ ನೀಡಿದ್ದಾರೆ.

ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಸೋಂಕು ಗುಣಮುಖರಾದವರು ಹಾಗೂ ಇವರ ಸಂಪರ್ಕದಲ್ಲಿದ್ದು, ಕ್ವಾರಂಟೈನ್‌ ಮುಗಿಸಿದವರನ್ನು ಬಿಬಿಎಂಪಿಯಿಂದಲೇ ಹೋಟೆಲ್‌ವೊಂದರಲ್ಲಿ ಇರಿಸಿಕೊಳ್ಳಲಾಗಿದೆ. ಅವರನ್ನು ಸದ್ಯಕ್ಕೆ ಹೋಟೆಲ್‌ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನಿಸಲಾಗುವುದು.
●ವಿ. ಅನ್ಬುಕುಮಾರ್‌, ಬಿಬಿಎಂಪಿ ವಿಶೇಷ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next