Advertisement

ಕಿಡ್ನಾಪ್ ನಡೆಸಿ ಚಿನ್ನ ದರೋಡೆ, ಕೊಲೆ ಯತ್ನ: ಮೂಡಬಿದಿರೆಯಲ್ಲಿ 9 ಮಂದಿಯ ಬಂಧನ

02:01 PM May 28, 2021 | Team Udayavani |

ಮಂಗಳೂರು: ಚಿನ್ನ ಹೊಂದಿದ್ದ ವ್ಯಕ್ತಿಯೋರ್ವನನ್ನು ಅಪಹರಿಸಿ, ದರೋಡೆ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಮತ್ತು ಮೂಡಬಿದಿರೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಅಪಹರಣ ಪ್ರಕಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೊಹಮ್ಮದ್ ಮಹಜ್ ಮತ್ತು ಮೊಹಮ್ಮದ್ ಅದಿಲ್ ನನ್ನು ಬಂಧಿಸಲಾಗಿದ್ದು, ಇದೀಗ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರಿನ ಜೋಕಟ್ಟೆ ನಿವಾಸಿ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ, ಮೊಹಮ್ಮದ್ ಶಾರೂಕ್, ಬೆಂಗಳೂರಿನ ಜೆಪಿ ನಗರದ ಸೈಯದ್ ಹೈದರಾಲಿ, ಆಸೀಫ್ ಅಲಿ, ಮುಂಬೈ ಕಾಂಬೇಕರ್ ಸ್ಟ್ರೀಟ್ ನ ಅಬ್ದುಲ್ ಶೇಖ್, ಶಾಬಾಸ್ ಹುಸೈನ್, ಶೇಖ್ ಸಾಜಿದ್ ಹುಸೈನ್, ಮುಸ್ತಾಕ್ ಖುರೇಷಿ  ಮತ್ತು ಭೀವಂಡಿಯ ಮುಶಾಹಿದ್ ಅನ್ಸಾರಿ ಎಂಬ ಆರೋಪಿಗಳನ್ನು ಮೂಡಬಿದಿರೆಯ ಬೆಳುವಾಯಿಯಲ್ಲಿ ಬಂಧಿಸಲಾಗಿದೆ.

ಘಟನೆಯ ವಿವರ: ಮೇ ಮೊದಲ ವಾರದಲ್ಲಿ ಮುಂಬೈನ ರೆಹಮಾನ್ ಶೇಖ್  ಎಂಬವರು ಅವರ ಸಂಬಂಧಿಕರಾದ ಬೆಂಗಳೂರಿನ ಹೈದರಾಲಿಗೆ ನೀಡುವಂತೆ ಮೂಡಬಿದಿರೆಯ ವಕಾರ್ ಯೂನಸ್ ಬಳಿ ಚಿನ್ನವಿರುವ ಪಾರ್ಸಲ್ ನೀಡಿದ್ದರು. ಇದರ ಬಗ್ಗೆ ಮಾಹಿತಿ ತಿಳಿದ ಯೂನಸ್ ಸ್ನೇಹಿತ ಮೂಡಬಿದಿರೆ ಬೆಳುವಾಯಿ  ನಿವಾಸಿ ಮಹಝ್ ಎಂಬಾತ ಯೂನಸ್ ನನ್ನು ನೇರವಾಗಿ ಬೆಳುವಾಯಿಗೆ ಬರುವಂತೆ ತಿಳಿಸಿದ್ದ. ಅದರಂತೆ ವಕಾರ್ ಯೂನಸ್ ಕಾರಿನಲ್ಲಿ ಬರುತ್ತಿದ್ದಾಗ ಪಚ್ಚಿಮೊಗರು ಎಂಬಲ್ಲಿ ಮಹಝ್, ಉಪ್ಪಳದ ಆದಿಲ್ ಹಾಗೂ ಆತನ ಸ್ನೇಹಿತರು ಭೇಟಿ ಮಾಡಿ, ಅಲ್ಲಿಂದ ಕೇರಳಕ್ಕೆ ಕರೆದುಕೊಂಡು ಹೋಗಿ ಪಾರ್ಸೆಲ್ ನಲ್ಲಿದ್ದ 440 ಗ್ರಾಂ ಚಿನ್ನ ದೋಚಿ, ಯೂನಸ್ ನನ್ನು ಉಪ್ಪಳದಲ್ಲಿ ಬಿಟ್ಟು ತೆರಳಿದ್ದರು.

ಇತ್ತ ಪಾರ್ಸೆಲ್ ತಲುಪದೇ ಇದ್ದ ಕಾರಣ ರೆಹಮಾನ್ ಶೇಖ್ ಮತ್ತು ಹೈದರಾಲಿಯವರು ಕೇಳಿದಾಗ ದರೋಡೆಯ ಬಗ್ಗೆ ವಕಾರ್ ಯೂನಸ್ ತಿಳಿಸಿದ್ದಾನೆ. ಆಗ “ಚಿನ್ನ ನೀಡು, ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ” ಎಂದು ರೌಡಿಶೀಟರ್ ಪಟೌಡಿ ಸಲಾಂ ಮೂಲಕ ಬೆದರಿಕೆ ಹಾಕಿಸಿದ್ದಾರೆ. ಪಟೌಡಿ ಸಲಾಂ ನು ವಕಾರ್ ಯೂನಸ್ ನ ಮನೆಗೆ ತೆರಳಿ ಬೆದರಿಕೆ ಹಾಕಿದ್ದ. ಇದರಿಂದಾಗಿ ಚಿನ್ನ ದರೋಡೆಯ ಬಗ್ಗೆ ಯೂನಸ್ ಮೂಡಬಿದಿರೆ ಠಾಣೆಯಲ್ಲಿ ಮೇ 21ರಂದು ದೂರು ನೀಡಿದ್ದ.

Advertisement

ದೂರಿನನ್ವಯ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮೂಡಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾಲಿಯಾ ಸುಹೈಲ್ ಗ್ಯಾಂಗ್ ನ ಸಹಚರರಾದ ಮೊಹಮ್ಮದ್ ಮಜಝ್ ಮತ್ತು ಮೊಹಮ್ಮದ್ ಆದಿಲ್ ನನ್ನು ಮೇ 22ರಂದು ಬಂಧಿಸಿದ್ದರು. ಇದಲ್ಲದೆ ಕಾಂಞಗಾಂಡ್ ನ ಜುವೆಲ್ಲರಿಗೆ ಮಾರಿದ್ದ 13,86,600 ರೂ. ಮೌಲ್ಯದ 300 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಚಿನ್ನ ಕಳೆದುಕೊಂಡಿದ್ದ ಮುಂಬೈಯ ರೆಹಮಾನ್ ಶೇಖ್ ನು ಚಿನ್ನ ವಸೂಲಿ ಮಾಡಲು ಆಗದಿದ್ದಲ್ಲಿ ಯೂನಸ್ ನ ಕೊಲೆ ಮಾಡಲು ರೌಡಿ ಶೀಟರ್ ಪಟೌಡಿ ಸಲಾಂಗೆ ಐದು ಲಕ್ಷ ರೂ ಗೆ ಸುಪಾರಿ ನೀಡಿದ್ದ. ಪಟೌಡಿ ಸಲಾಂನು, ರೆಹಮಾನ್ ಶೇಖ್ ನ ತಮ್ಮ ಅಬ್ದುಲ್ ಶೇಖ್ ಸೇರಿದಂತೆ ನಾಲ್ಕು ಮಂದಿ ರೌಡಿಗಳು ಮತ್ತು ಬೆಂಗಳೂರಿನಿಂದ ಬಂದ ಮೂವರು ಸೇರಿ ಮಾರಾಕಾಯುಧಗಳೊಂದಿಗೆ ಕೊಲೆಗೆ ಯೋಜನೆ ಹಾಕಿದ್ದರು. ಬೆಳುವಾಯಿಯ ಮಹಜ್ ನ ಮನೆಯ ಬಳಿ ಇನ್ನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಕುಳಿತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next