Advertisement

ವಿಷ್ಣು ಅಭಿಮಾನಿಗಳ ಸಂಘದಿಂದ 8ನೇ ಪುಣ್ಯಸ್ಮರಣೆ 

12:29 PM Dec 31, 2017 | Team Udayavani |

ಮೈಸೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ 8ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ವತಿಯಿಂದ ಶನಿವಾರ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

Advertisement

ಕರುಣಾಮಯಿ ಸಂಘ: ನಗರದ ಕರುಣಾಮಯಿ ವಿಷ್ಣುವರ್ಧನ್‌ ಸಂಘದಿಂದ ಕೋಟೆ ಆಂಜನೇಯ ದೇವಸ್ಥಾನದ ಬಳಿಯ ವಿಷ್ಣುವರ್ಧನ್‌ ಉದ್ಯಾನ‌ದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗತಿಕರು ಹಾಗೂ ಬಡವರಿಗೆ ಸ್ವೆಟರ್‌ ಮತ್ತು ಸೀರೆ ವಿತರಿಸಲಾಯಿತು.

ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ರಾಜೀವ್‌ ಮಾತನಾಡಿ, ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರು ಮೈಸೂರಿನವರೇ ಆಗಿದ್ದು, ವಿಶ್ವದೆಲ್ಲೆಡೆ ಜನಪ್ರಿಯರಾಗಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ನಗರ ಪಾಲಿಕೆ ಇಚ್ಛಾಶಕ್ತಿಯಿಂದ ವಿಷ್ಣುವರ್ಧನ್‌ ಅವರ ಪುತ್ಥಳಿ ನಿರ್ಮಿಸಬೇಕಿದೆ.

ಕನ್ನಡ ನಾಡು-ನುಡಿ ಹಾಗೂ ಜಲದ ವಿಷಯದಲ್ಲಿ ವಿಷ್ಣುವರ್ಧನ್‌ ಅವರು ಪ್ರತಿ ಬಾರಿಯೂ ದನಿ ಎತ್ತುತ್ತಿದ್ದರು. ಅವರ ಸಾಧನೆ ನೆನಪು ಕೋಟ್ಯಂತರ ಅಭಿಮಾನಿಗಳಲ್ಲಿ ಶಾಶ್ವತವಾಗಿ ಉಳಿಯಬೇಕಿದೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ವಿಷ್ಣು ಸ್ಮಾರಕ ನೆನಗುದಿಗೆ ಬಿದ್ದಿದ್ದು, ಸರ್ಕಾರ ಈ ಕೂಡಲೇ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಮೈಸೂರಿನ ವಿಷ್ಣು ಅಭಿಮಾನಿಗಳೇ ವಿಷ್ಣು ಪ್ರತಿಮೆ, ಸ್ಮಾರಕ ಸ್ಥಾಪಿಸಲು ಮುಂದಾಗುತ್ತೇವೆ ಎಂದರು.

ನೆರವು ನೀಡಲು ಮನವಿ: ಕನ್ನಡ ಚಲನಚಿತ್ರರಂಗ ಮಹಾನ್‌ ನಟರಾದ ಕೆ.ಎಸ್‌.ಅಶ್ವತ್ಥ್ ಅವರ ಪುತ್ರ ಶಂಕರ್‌ ಅಶ್ವಥ್‌ರಿಗೆ ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ನಟಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ ಯಾರ ಬಳಿಯೂ ಕೈಚಾಚದೆ ಸ್ವಾಭಿಮಾನದಿಂದ ಕ್ಯಾಬ್‌ ಚಾಲಕರಾಗಿ ದಿನಗೂಲಿ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ.

Advertisement

ಹೀಗಾಗಿ ಚಿತ್ರರಂಗದಲ್ಲಿನ ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ನಟರು ಶಂಕರ್‌ ಅಶ್ವತ್ಥ್ರಿಗೆ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ಲಕ್ಷಿವೆಂಕಟೇಶ್ವರ ಟ್ರಸ್ಟ್‌ ಅಧ್ಯಕ್ಷ ಗಿರಿಧರ್‌, ಕರುಣಾಮಯಿ ವಿಷ್ಣುವರ್ಧನ್‌ ಸಂಘದ ಅಧ್ಯಕ್ಷ ಎಸ್‌.ಎನ್‌.ರಾಜೇಶ್‌, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೆಎಂಪಿಕೆ ಟ್ರಸ್ಟ್‌ ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌, ಕಡಕೊಳ ಜಗದೀಶ್‌, ಸಂದೇಶ್‌ ಪವಾರ್‌, ಕಶ್ಯಪ್‌, ರಂಗನಾಥ್‌ ಇದ್ದರು.

ಪಾತಿ ಫೌಂಡೇಷನ್‌: ನಗರದ ಪಾತಿ ಫೌಂಡೇಷನ್‌ನಿಂದ ಕೋಟೆ ಆಂಜನೇಯ ದೇವಸ್ಥಾನದ ಬಳಿಯ ವಿಷ್ಣುವರ್ಧನ್‌ ಉದ್ಯಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.

ಬಳಿಕ ಚಾಮರಾಜ ಜೋಡಿರಸ್ತೆಯ ಲಕ್ಷಿ ಚಿತ್ರಮಂದಿರದ ಎದುರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಸಂಜೆ 6ಕ್ಕೆ ಅಗ್ರಹಾರ ವೃತ್ತದಲ್ಲಿ ವಿಷ್ಣು ಮ್ಯೂಸಿಕ್‌ ವೃಂದದಿಂದ ಸಂಗೀತ ಸಂಜೆ ಹಾಗೂ ಗಣ್ಯರಿಗೆ ಸನ್ಮಾನ ನಡೆಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next