ಚಿಕ್ಕಬಳ್ಳಾಪುರ: ರೈತರ ಸಮಗ್ರ ಮಾಹಿತಿ ದಾಖಲಿಸುವ ಪ್ರೋಟ್ಸ್ ಆ್ಯಪ್‌ನಲ್ಲಿ ಜಿಲ್ಲೆಯ ಬರೋಬ್ಬರಿ 89,344 ರೈತರ ಜಮೀನು ವಿವರಗಳು ಇನ್ನೂ ನೋಂದಣಿ ಆಗದೇ ಹೊರ ಉಳಿದಿದ್ದು, ಇದರ ಪರಿಣಾಮ ಸರ್ಕಾರ ಬರದ ಹಿನ್ನೆಲೆಯಲ್ಲಿ ನೀಡುವ ಬೆಳೆ ನಷ್ಟ ಪರಿಹಾರ ಸಿಗುವುದು ಅನುಮಾನವಾಗಿದೆ.
ಬೆಳೆ ನಷ್ಟ ಪರಿಹಾರ ಪಡೆಯಬೇಕಾದರೆ ರೈತರ ಮಾಹಿತಿ ಸಮಗ್ರವಾಗಿ ಪ್ರೋಟ್ಸ್ ಆ್ಯಪ್‌ನಲ್ಲಿ ದಾಖಲಾಗಿರಬೇಕು. ಆದರೆಜಿಲ್ಲೆಯಲ್ಲಿ ಸಾಕಷ್ಟು ಅರಿವು ಮೂಡಿಸಿದರೂ ಪ್ರೋಟ್ಸ್ ಆ್ಯಪ್‌ನಲ್ಲಿ ಒಟ್ಟು 2,28,158 ರೈತರ ಪೈಕಿ ಇಲ್ಲಿವರೆಗೂ ಕೇವಲ 1,38,814 ರೈತರು ಆ್ಯಪ್‌ನಲ್ಲಿ ದಾಖಲಾಗಿದ್ದು, ಇನ್ನೂ 89,344 ರೈತರು ಹೊರಗೆ ಉಳಿದಿದ್ದಾರೆ.
ಕೃಷಿ ಇಲಾಖೆ ಎಲ್ಲಾ ರೈತರ ಸಮಗ್ರ ವಿವರಗಳನ್ನು ಪಹಣಿ ನಂ, ಸರ್ವೆ ನಂ, ವಿಸ್ತೀರ್ಣ, ಬೆಳೆ ವಿವರ ಮತ್ತಿತರ ಅಂಶಗಳನ್ನು ಡಿಜಿಟಲೀಕರಣ ಮಾಡುವ ದೃಷ್ಠಿಯಿಂದ ಹೊಸದಾಗಿ ಪರಿಚಯಸಿರುವ ಪ್ರೋಟ್ಸ್ ಆ್ಯಪ್‌ನಲ್ಲಿ ರೈತರ ವಿವರ ಹಾಗೂ ಪ್ಲಾಟ್‌ಗಳನ್ನು ಅಪ್ಲೋಡ್ ಮಾಡಬೇಕು. ಆದರೆ ಜಿಲ್ಲೆಯಲ್ಲಿ ಮಾತ್ರ ಇನ್ನೂ 89,344 ಮಂದಿ ರೈತರು ಪ್ರೋಟ್ಸ್ ಆ್ಯಪ್‌ನಲ್ಲಿ ನೋಂದಣಿ ಆಗದೇ ಇರುವುದು ಕೃಷಿ ಇಲಾಖೆ ನೀಡಿರುವ ಅಂಕಿ, ಅಂಶಗಳಿಂದ ದೃಢಪಟ್ಟಿದೆ.
ಫಲಾನುಭವಿಗಳ ನೈಜತೆಯನ್ನು ಖಾತ್ರಿ ಪಡಿಸಿಕೊಳ್ಳುವುದರ ಜೊತೆಗೆ ಸೌಲಭ್ಯಗಳು ದುರ್ಬಳಕೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಪ್ರೋಟ್ಸ್ ಆ್ಯಪ್ ಅಭಿವೃದ್ದಿಪಡಿಸಿದ್ದು, ರೈತರಿಗೆ ಬೆಳೆ ನಷ್ಟ ಪರಿಹಾರದಿಂದ ಹಿಡಿದು ಬೆಳೆ ವಿಮೆ ಪಾವತಿ, ಸರ್ಕಾರದಿಂದ ಏನೇ ಸೌಲಭ್ಯ ಪಡೆಯಲು ಪ್ರೋಟ್ಸ್ ಐಡಿನಲ್ಲಿ ರೈತರು ತಮ್ಮ ಜಮೀನು ವಿವರಗಳನ್ನು ದಾಖಲಿಸಿರಬೇಕು. ಆದರೆ ಜಿಲ್ಲೆಯಲ್ಲಿ ಪ್ರೋಟ್ಸ್ ಆ್ಯಪ್ ದಾಖಲಾತಿ ವಿಚಾರದಲ್ಲಿ ಅರ್ಧಕ್ಕರ್ಧ ರೈತರು ಹೆಸರು ನೋಂದಣಿ ಆಗದೇ ಇರುವುದು ಎದ್ದು ಕಾಣುತ್ತಿದ್ದು, ಅದೇ ರೀತಿ ಪ್ಲಾಟ್‌ಗಳು ಕೂಡ ನೋಂದಣಿಗೆ ಬಾಕಿ ಇವೆ.
ಗ್ರಾಮ ಒನ್, ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ: ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ರೈತರು ಪ್ರೋಟ್ಸ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆಧಾರ್ , ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಗಿಸಬೇಕು. ಪ್ರೋಟ್ಸ್ ಆ್ಯಪ್‌ನಲ್ಲಿ ನೋಂದಣಿ ಆಗದ ರೈತರಿಗೆ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಕೂಡ ಬರಲ್ಲ.
– ಕಾಗತಿ ನಾಗರಾಜಪ್ಪ