Advertisement

89 ಕಿ.ಮೀ. ಕ್ರಮಿಸಿ ದಾಖಲೆ ಬರೆದ ಸತೀಶ್‌ ಗುಜರನ್‌

12:12 AM Nov 07, 2019 | Sriram |

ಉಡುಪಿ: ಕಟಪಾಡಿ ನಿವಾಸಿ ಸತೀಶ್‌ ಗುಜರನ್‌ (57) ಅವರು ಚೈನ್‌ ಸ್ಮೋಕಿಂಗ್‌ನಿಂದ ಹೊರಬರುವ ಉದ್ದೇಶದಿಂದ 18 ವರ್ಷದ ಹಿಂದೆ ಓಟವನ್ನು ಆರಂಭಿಸಿದ್ದರು. ಇದೀಗ ಅವರ ಓಟ ದಕ್ಷಿಣ ಆಫ್ರಿಕಾದ ಕಾಮ್ರೇಡ್‌ ಮ್ಯಾರಥಾನ್‌ನಲ್ಲಿ 89 ಕಿ.ಮೀ. ಕ್ರಮಿಸಿ ದಾಖಲೆ ನಿರ್ಮಿಸುವಂತೆ ಮಾಡಿದೆ.

Advertisement

ದಕ್ಷಿಣ ಆಫ್ರಿಕಾ ಪ್ರತಿವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ 89 ಕಿ.ಮೀ. ಕಾಮ್ರೇಡ್‌ ಮ್ಯಾರಥಾನ್‌ ಆಯೋಜಿಸುತ್ತದೆ. ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ ನೂರಾರು ಜನರು ಭಾಗವಹಿಸುತ್ತಾರೆ. ಸ್ಪರ್ಧೆಯ ವಿಜೇತರಿಗೆ 25,000 ಡಾಲರ್‌ ಬಹುಮಾನವಿದೆ. ಮ್ಯಾರಥಾನ್‌ನಲ್ಲಿ ಸತತ 10 ವರ್ಷ ಭಾಗವಹಿಸಿ, ಯಶಸ್ವಿಯಾಗಿ 89 ಕಿ.ಮೀ. ಕ್ರಮಿಸಿದವರಿಗೆ ಮ್ಯಾರಥಾನ್‌ ಸಮಿತಿ ಶಾಶ್ವತ ಸದಸ್ಯತ್ವ ಸಂಖ್ಯೆಯನ್ನು ನೀಡುತ್ತದೆ. ಈ ಸದಸ್ಯತ್ವವನ್ನು ಪಡೆದ ಮೊದಲ ಭಾರತೀಯರಾಗಿ ಸತೀಶ್‌ ಗುಜರಾನ್‌ ಗುರುತಿಸಿಕೊಂಡಿದ್ದಾರೆ. 2019ರ ಎಪ್ರಿಲ್‌ನಲ್ಲಿ ನಡೆದ ಕಾಮ್ರೇಡ್‌ ಮ್ಯಾರಥಾನ್‌ನಲ್ಲಿ ಸತೀಶ್‌ ಅವರು 89 ಕಿ.ಮೀ. ದೂರವನ್ನು 10.30 ನಿಮಿಷದಲ್ಲಿ ಕ್ರಮಿಸಿದ್ದಾರೆ. ಸತತ 10 ವರ್ಷಗಳ ಕಾಲ ಈ ಮ್ಯಾರಥಾನ್‌ನಲ್ಲಿ ಭಾರತೀಯರು ಭಾಗವಹಿಸಿದ ಇತಿಹಾಸವಿಲ್ಲ.

ಚೈನ್‌ ಸ್ಮೋಕರ್‌ ಕಥೆ
ಕಟಪಾಡಿ ಸತೀಶ್‌ ಪ್ರಸ್ತುತ ಮುಂಬ ಯಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಲೆ ದಿನಗಳಲ್ಲಿ ಕುತೂಹಲಕ್ಕಾಗಿ ಪ್ರಾರಂಭಿಸಿದ ಸಿಗರೇಟ್‌ ಸೇವನೆ ಅವರನ್ನು ಚೈನ್‌ ಸ್ಮೋಕರ್‌ ಆಗಿ ಪರಿವರ್ತಿಸಿತ್ತು. 2004ರಲ್ಲಿ ಸ್ಮೋಕಿಂಗ್‌ನಿಂದ ಹೊರಬರಲು ನಿರ್ಧರಿಸಿ, ಓಟವನ್ನು ಪ್ರಾರಂಭಿಸಿ ದರು. 2009ರಲ್ಲಿ ಇಶಾ ಸಂಸ್ಥೆಯ ಹಾಗೂ ಯೋಗದ ಸಹಾಯದಿಂದ ಸ್ಮೋಕಿಂಗ್‌ನಿಂದ ಮುಕ್ತಿ ಪಡೆದು ಕೊಂಡರು.

ಸಂಸ್ಥೆಯ ನೆರವಿಗಾಗಿ ಓಟ
ಸ್ಮೋಕಿಂಗ್‌ನಿಂದ ಮುಕ್ತಿ ನೀಡಿದ ಹಾಗೂ ವಿಶೇಷ ಮಕ್ಕಳಿಗಾಗಿ ಕಾರ್ಯಾಚರಿಸುತ್ತಿರುವ ಇಶಾ ಸಂಸ್ಥೆಗೆ ನೆರವಾಗಲು ಸತೀಶ್‌ ಅವರು ಅನೇಕ ಮ್ಯಾರಥಾನ್‌ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಿಕ್ಕಿದ ಸುಮಾರು 5ರಿಂದ 6 ಲ.ರೂ.ವನ್ನು ಇಶಾ ಸಂಸ್ಥೆಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ದೃಢ ಸಂಕಲ್ಪ ಅಗತ್ಯ
ನಾನು ಪ್ರಾರಂಭದಲ್ಲಿ 500 ಮೀ. ಕ್ರಮಿಸುವಷ್ಟರಲ್ಲಿ ಆಯಾಸಗೊಳ್ಳುತ್ತಿದೆ. ಆದರೆ ಛಲ ಬಿಡದೆ 20ರಿಂದ 30 ಕಿ.ಮೀ. ಮ್ಯಾರಥಾನ್‌ನಲ್ಲಿ ಭಾಗವಹಿಸಿದೆ. ಆತ್ಮ ತೃಪ್ತಿಗಾಗಿ ಮುಂಬಯಿಯಲ್ಲಿ, ಅಸುಪಾಸಿನ ನಗರಗಳಲ್ಲಿ ನಡೆಯುವ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಸ್ಮೋಕಿಂಗ್‌ನಿಂದ ಮುಕ್ತಿ ಪಡೆಯಲು ಆತ್ಮಸ್ಥೈರ್ಯ ಬೇಕು. ಎಷ್ಟೇ ಕಷ್ಟವಾದರೂ ಸಿಗರೇಟ್‌ ಸೇವಿಸುವುದಿಲ್ಲ ಎನ್ನುವ ದೃಢ ಸಂಕಲ್ಪವಿದ್ದಾಗ ಮಾತ್ರ ಸ್ಮೋಕಿಂಗ್‌ನಿಂದ ಮುಕ್ತರಾಗಲು ಸಾಧ್ಯ ಎಂದು ಸತೀಶ್‌ ತಿಳಿಸಿದರು.

Advertisement

ಇಶಾ ಸಂಸ್ಥೆಯ ಸಾಮಾಜಿಕ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ದ.ಆಫ್ರಿಕಾದ ಕಾಮ್ರೇಡ್‌ ಮ್ಯಾರಥಾನ್‌ನಲ್ಲಿ 89 ಕಿ.ಮೀ. ಕ್ರಮಿಸಿ ಸದಸ್ಯತ್ವ ಪಡೆದುಕೊಂಡಿದ್ದೇನೆ.
-ಸತೀಶ್‌ ಗುಜರನ್‌ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next