ದೌಸಾ: ಒಂದು ಕೈಯ್ಯಲ್ಲಿ ಊರುಗೋಲು, ಮತ್ತೊಂದು ಕೈಯ್ಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ದಣಿವರಿಯದೇ ಮೈಲುಗಟ್ಟಲೆ ನಡೆಯುತ್ತಿರುವ ಈ ತಾತನನ್ನು ನೋಡಿದರೆ ಯಾರಿಗೂ ಅಚ್ಚರಿಯಾಗದೇ ಇರದು.
ಯುವಕರನ್ನೂ ನಾಚಿಸುವಂತೆ 88 ವರ್ಷದ ಈ ಅಜ್ಜ ನಡೆಯುತ್ತಿರುವುದು ಎಲ್ಲಿಗೆ ಗೊತ್ತೇ? ಮಧ್ಯಪ್ರದೇಶದ ಉಜ್ಜೈನ್ ನಿಂದ ಜಮ್ಮು ಮತ್ತು ಕಾಶ್ಮೀರದ ಲಾಲ್‌ಚೌಕ್‌ವರೆಗೆ!
ಹೌದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇತ್ತೀಚೆಗೆ ಮಧ್ಯಪ್ರದೇಶ ತಲುಪಿದಾಗ, 88ರ ವಯೋವೃದ್ಧ ಕರುಣಾ ಪ್ರಸಾದ್ ಮಿಶ್ರಾ ಕೂಡ ಜತೆಗೂಡಿದರು. ಅಲ್ಲಿ ನಡಿಗೆ ಆರಂಭಿಸಿರುವ ಅವರು ಈಗಲೂ ನಡೆಯುತ್ತಿದ್ದಾರೆ.
“ಕಾಶ್ಮೀರದವರೆಗೆ ನಡೆಯುತ್ತೇನೆ ಎಂದು ಉಜ್ಜೈನ್ ಮಹಾಕಾಲೇಶ್ವರ ದೇಗುಲದಲ್ಲೇ ನಾನು ಶಪಥ ಮಾಡಿದ್ದೇನೆ. ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ನನಗೆ “ಕಾರಲ್ಲಿ ಕುಳಿತುಕೊಳ್ಳಿ’ ಎಂದು ಮನವಿ ಮಾಡಿದರು. ಆದರೆ ನಾನು ಒಪ್ಪಿಲ್ಲ. ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವವರೆಗೂ ನಾನು ಈ ಯಾತ್ರೆಯಲ್ಲಿ ನಡೆದೇ ಸಾಗುತ್ತೇನೆ. ಅದಾದ ಬಳಿಕ, ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಕೈಗೊಳ್ಳುವ ಹೊಸ ಸಂಕಲ್ಪ ಮಾಡುತ್ತೇನೆ’ ಎಂದಿದ್ದಾರೆ ಮಿಶ್ರಾ.
ಅಷ್ಟು ದೂರ ನಡೆದರೆ ನಿಮ್ಮ ಆರೋಗ್ಯದ ಕಥೆಯೇನು ಎಂದು ಪ್ರಶ್ನಿಸಿದರೆ, “ನಾನು ಕಾಂಗ್ರೆಸ್‌ನ ಹಳೆಯ ಸಮರಾಶ್ವ(ಯುದ್ಧ ಕುದುರೆ). 1960ರಿಂದಲೂ ಪಕ್ಷದಲ್ಲಿದ್ದೇನೆ. ನನಗೆ ನಡೆದು ಅಭ್ಯಾಸವಿದೆ. 1935-36ರಲ್ಲಿ ಮಹಾತ್ಮ ಗಾಂಧೀಜಿಯೊಂದಿಗೆ ಜಬಲ್ಪುರದಿಂದ ಅಲಹಾಬಾದ್‌ವರೆಗೆ ನಡೆದಿದ್ದೇನೆ. ನೆಹರೂ ಮತ್ತು ವಿನೋಬಾ ಭಾವೆ ಅವರೊಂದಿಗೂ ನಡೆದಿದ್ದೇನೆ. ರಾಹುಲ್‌ರಲ್ಲಿ ಹೊಸ ಭರವಸೆಯನ್ನು ಕಂಡಿದ್ದೇನೆ. “ನೂರು ದಾಟಿದ ಬಳಿಕ ಎಣಿಕೆ ಇಲ್ಲ, ಕೈಜೋಡಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎನ್ನುತ್ತಾರೆ ಮಿಶ್ರಾ.