Advertisement

87ಎ ರಿಬೇಟ್‌ ಮತ್ತು ಮುಂದಿನ ಹಾದಿ

09:09 AM Jan 30, 2020 | sudhir |

ಕಳೆದ ವಾರ 87ಎ ರಿಯಾಯಿತಿ ಮತ್ತು ಅದರ ಮಹತ್ವದ ಬಗ್ಗೆ ನೋಡಿ ದೆ ವು. ಅದು ರೂ. 5 ಲಕ್ಷದ ಒಳಗಿನ “ಕರಾರ್ಹ ಆದಾಯ’ ಇರುವ ವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮ ನವೂ ತಮ್ಮ ಕರಾರ್ಹ ಆದಾಯವನ್ನು ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಲು ಈ ಕೆಳಗಿನ ಹೂಡಿಕೆ/ವೆಚ್ಚಗಳನ್ನು ಬಳಸಿಕೊಳ್ಳಬಹುದು:

Advertisement

1. ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ತಮ್ಮ ಸಂಬಳ ಅಥವಾ ಪೆನ್ಶನ್‌ ಮೊತ್ತದಿಂದ ಒಟ್ಟು ರೂ. 50,000 ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ. ಸಂಬಳ ಆದಾಯ ಇರುವವರ ಸಂದರ್ಭದಲ್ಲಿ ಈ ಡಿಡಕ್ಷನ್‌ ಅನ್ನು ಉದ್ಯೋಗದಾತರೇ ಕಳೆದು ಕರ ಲೆಕ್ಕ ಹಾಕುತ್ತಾರೆ. ಈ ಸೆಕ್ಷನ್‌ ತುಸು ಹೊಸದಾದ ಕಾರಣ ಎತ್ತಿ ಹೇಳಲಾಗಿದೆ. ಎರಡೆರಡು ಬಾರಿ ಲೆಕ್ಕ ಹಾಕದಿರಿ. (ಈ ಸೆಕ್ಷನ್‌ ಬಂದ ಮೇಲೆ ಟ್ರಾವೆಲ್‌ ಮತ್ತು ಮೆಡಿಕಲ್‌ ಅಲೋವನ್ಸ್‌ ಮೇಲೆ ನೀಡುವ ರಿಯಾಯಿತಿಯನ್ನು ಇದರಲ್ಲಿಯೇ ವಿಲೀನಗೊಳಿಸಲಾಗಿದೆ. ಆದರೆ ಎಚ್‌.ಆರ್‌.ಎ, ಎಲ….ಟಿ.ಎ ಇತ್ಯಾದಿಗಳು ಮೊದಲಿನಂತೆಯೇ ಮುಂದುವರಿದಿದೆ)

2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್‌ 24)
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ರೂ. 2 ಲಕ್ಷದವರೆಗೆ ಸ್ವಂತ ವಾಸದ 2 ಮನೆಗಳ ಮೇಲೆ ಹಾಗೂ ಬಾಡಿಗೆ ನೀಡಿರುವ ಮನೆಯ ಮೇಲೆ ಪ್ರತ್ಯೇಕವಾಗಿ ಇನ್ನೂ 2 ಲಕ್ಷದ ಮಿತಿಯಲ್ಲಿ ಗೃಹಸಾಲದ ಬಡ್ಡಿಯನ್ನು Income from House property ಅಡಿಯಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್‌ ಟ್ಯಾಕ್ಸ್‌ ಹಾಗೂ ಮತ್ತು ಬಾಡಿಗೆಯ ಶೇ. 30 ನಿರ್ವಹಣಾ ವೆಚ್ಚಗಳನ್ನೂ ಕೂಡಾ ಕಳೆಯಬಹುದು.

3. ಎನ್‌.ಪಿ.ಎಸ್‌/ಅಟಲ್‌ ಪೆನ್ಶನ್‌ (ಸೆಕ್ಷನ್‌ 80ಸಿಸಿಡಿ(1ಬಿ)
(ಎನ್‌.ಪಿ.ಎಸ್‌. ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್‌.ಪಿ.ಎಸ್‌. ದೇಣಿಗೆ ಸೆಕ್ಷನ್‌ 80ಸಿ ಸರಣಿಯ ಅಡಿಯಲ್ಲಿ ಪಿಪಿಎಫ್, ಎನ್‌.ಎಸ್‌.ಸಿ, ಇ.ಎಲ….ಎಸ್‌.ಎಸ್‌, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಜೊತೆಗೆ 80 ಸಿಸಿಡಿ(1) ಅಡಿಯಲ್ಲಿ ಬರುತ್ತದೆ . ಅದನ್ನು ಆಮೇಲೆ ನೋಡೋಣ) ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್‌ 80 ಸಿಸಿಡಿ (1ಬಿ) ಅಡಿಯಲ್ಲಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ನಿಮ್ಮ ಒಟ್ಟಾರೆ
ಎನ್‌.ಪಿ.ಎಸ್‌. ದೇಣಿಗೆಯನ್ನು ಇವೆರಡರಲ್ಲಿ ಹೇಗೆ ಬೇಕಾದರೂ ತೆಗೆದುಕೊಳ್ಳಲು ನಿಮಗೆ ಸ್ವಾತಂತ್ರ್ಯ ಇದೆ. ಹಾಗಾಗಿ ಮೊತ್ತ ಮೊದಲು ಎನ್‌.ಪಿ.ಎಸ್‌. ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು. ಎನ್‌.ಪಿ.ಎಸ್‌. ನ ಕರ ವಿನಾಯಿತಿಯ ಬಗ್ಗೆ ಸಾಕಷ್ಟು ಗೊಂದಲವಿದೆ. ಅದರಲ್ಲಿ ಒಟ್ಟಾರೆ 80ಸಿಸಿಡಿ(1) ಅಡಿಯಲ್ಲಿ 1.5 ಲಕ್ಷ ಮತ್ತು 80ಸಿಸಿಡಿ(1ಬಿ) ಅಡಿಯಲ್ಲಿ ರೂ. 50,000 – ಈ ರೀತಿ ಒಟ್ಟು ರೂ. 2 ಲಕ್ಷದವರೆಗೆ ರಿಯಾಯಿತಿ ಎಣಿಸಬಹುದು. ಅಲ್ಲದೆ (ಇವೆರಡೂ ಅಲ್ಲದೆ, ಮೂರನೆಯದಾಗಿ, ಎನ್‌.ಪಿ.ಎಸ್‌. ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ)

4. ಮೆಡಿಕಲ್‌ ಇನ್ಶೂರುನ್ಸ್‌ (ಸೆಕ್ಷನ್‌ 80ಡಿ)
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್‌ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.

Advertisement

5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್‌ 80 ಡಿಡಿ)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್‌ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ.

6. ಗಂಭೀರ ಕಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹಿಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ. 40,000. ಆದರೆ, 60 ದಾಟಿದ ವರಿಷ್ಠರಿಗೆ ಈ ಮಿತಿ ರೂ 1,00,000.

7. ವಿದ್ಯಾ ಸಾಲದ ಬಡ್ಡಿ (ಸೆಕ್ಷನ್‌ 80 ಇ)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ವಿದ್ಯಾ ಸಾಲದ ಅಸಲಿನ ಮರುಪಾವತಿಗೆ ಕರ ವಿನಾಯಿತಿ ಇಲ್ಲ.

8. ಡೊನೇಶನ್‌ (ಸೆಕ್ಷನ್‌ 80 ಜಿ)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 – ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10 ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

9. ಬಾಡಿಗೆ ರಿಯಾಯಿತಿ (ಸೆಕ್ಷನ್‌ 80 ಜಿಜಿ)
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000 ವರೆಗೆ ಈ ಕೆಳಗಿನ ಸೂತ್ರದ ಪ್ರಕಾರ ಮನೆಬಾಡಿಗೆಯ ರಿಯಾಯಿತಿ ನೀಡಲಾಗುತ್ತದೆ:

1.ಒಟ್ಟು ಆದಾಯದ ಶೇ.10 ಅನ್ನು ಮೀರಿ ಪಾವತಿಸಿದ ಮನೆ ಬಾಡಿಗೆ. ಇಲ್ಲಿ ಒಟ್ಟು ಆದಾಯವೆಂದರೆ ಕೆಲ ಕ್ಯಾಪಿಟಲ್‌ ಗೈನ್ಸ್‌, ಎÇÉಾ 80ಸಿ ಸಂಬಂಧಿ ವಿನಾಯಿತಿಗಳನ್ನೂ ಕಳೆದ ಬಳಿಕ ಸಿಕ್ಕ ಕರಾರ್ಹ ಆದಾಯ.

2.ಒಟ್ಟು ಆದಾಯದ ಶೇ.25 ಮೊತ್ತ

3.ರೂ. 60,000 ವಾರ್ಷಿಕ ಮೊತ್ತ
ಇವುಗಳಲ್ಲಿ ಯಾವುದು ಕನಿಷ್ಠವೋ ಅದರ ಮೇಲೆ ಕರವಿನಾಯಿತಿ ಸಿಗುತ್ತದೆ ಅಂದರೆ ಅಂತಹ ಕನಿಷ್ಠ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯಲಾಗುತ್ತದೆ.

ಇಲ್ಲಿ ಸ್ವಂತ ಮನೆ ಇಲ್ಲದೆ ಎನ್ನುವ ಪ್ರಮೇಯ ಬಹು ಮುಖ್ಯವಾಗುತ್ತದೆ. ಸ್ವಂತ ಹೆಸರಿನಲ್ಲಿ ಅಥವಾ ಹೆಂಡತಿ ಯಾ ಮೈನರ್‌ ಮಕ್ಕಳ ಹೆಸರಿನಲ್ಲಿ ಮನೆ ಇದ್ದವರಿಗೆ ಈ ಸೆಕ್ಷನ್‌ ಅಡಿಯಲ್ಲಿ ಯಾವುದೇ ರಿಯಾಯಿತಿ ಸಿಗಲಾರದು. (ಹಾಗೂ ಸಂಬಳದ ಮೂಲಕ ಎಚ್‌.ಆರ್‌.ಎ. ಪಡೆಯುವ ಉದ್ಯೋಗಿಗಳಿಗೆ ಪ್ರತ್ಯೇಕ ಫಾರ್ಮುಲಾ ಪ್ರಕಾರ ರಿಯಾಯಿತಿಯನ್ನು ಉದ್ಯೋಗದಾತರೇ “ಸಂಬಳದ ಆದಾಯ’ದ ಅಡಿಯಲ್ಲಿ ನೀಡುತ್ತಾರೆ. ಅದನ್ನು ಇಲ್ಲಿ ಸೇರಿಸಿ ಸಜ್ಜಿಗೆ ಬಜಿಲ್‌ ಮಾಡಬೇಡಿ ಮತ್ತೆ!)

10. ಸ್ವಂತ ಅಂಗವೈಕಲ್ಯ (ಸೆಕ್ಷನ್‌ 80ಯು)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ. 1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ.
ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಇದರಲ್ಲಿ ಎಲ್ಲವೂ ಎಲ್ಲರಿಗೂ ಅನ್ವಯ ಇರಲಾರದು. ಅನ್ವಯವಾಗುವಂತಹ ಅಂಶಗಳನ್ನೂ ಮಾತ್ರವೇ ತೆಗೆದುಕೊಂಡು ತಮ್ಮ ಆದಾಯದಿಂದ ಒಂದೊಂದಾಗಿ ಕಳೆಯುತ್ತಾ ಹೋಗಿರಿ.

ಅದಾದ ಮೇಲೆ, ಪ್ರತ್ಯೇಕವಾಗಿ ಬಹುಶ್ರುತ ನಾಮ “ಸೆಕ್ಷನ್‌ 80ಸಿ’ ಸರಣಿಯ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ. 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಅವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು. ಸೆಕ್ಷನ್‌ 80ಸಿ ಹೂಡಿಕೆಯ ವಿವರಗಳನ್ನು ಮುಂದಕ್ಕೆ ನೋಡೋಣ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next