Advertisement

ಯಾದಗಿರಿ ಜಿಲ್ಲೆಯಲ್ಲಿ 873 ಸೋಂಕಿತರು

07:23 AM Jun 19, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕೋವಿಡ್ ನಂಜು ಇನ್ನು ಕಾಡುತ್ತಿದ್ದು, ಗುರುವಾರ ಜಿಲ್ಲೆಯಲ್ಲಿ 8 ಜನರಿಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ.

Advertisement

ಗುರುವಾರ ಪತ್ತೆಯಾದ ಮೂವರು ಮಹಿಳೆಯರಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಸುರುಪುರ ತಾಲೂಕು ದಿವಳಗುಡ್ಡದ 38 ವರ್ಷದ ಪಿ-7894, ಹೊಸ ಸಿದ್ದಾಪುರದ 36 ವರ್ಷದ ಪಿ-7895 ಹಾಗೂ ಯಾದಗಿರಿ ನಗರದ ದುಕಾನವಾಡಿಯ 34 ವರ್ಷದ ಪಿ-7896ರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರು ಮಹಿಳೆಯರಿಗೆ ಸೋಂಕು ಹೇಗೆ ಬಂತು ಎನ್ನುವುದು ಗೊತ್ತಾಗದೇ ಇರುವುದು ದೊಡ್ಡ ತಲೆನೋವಾಗಿದೆ. ಜನರಲ್ಲಿ ಆತಂಕವೂ ಮೂಡಿಸಿದೆ. ಸೋಂಕು ದೃಢವಾದವರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೇ? ಇಲ್ಲ ಸಮುದಾಯಕ್ಕೆ ವೈರಸ್‌ ವಕ್ಕರಿಸುತ್ತಿದೆ ಎನ್ನುವ ಭಯ ಕಾಡತೊಡಗಿದೆ.

ಸೋಂಕಿತರ ಮೂಲವನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಅಲ್ಲದೆ ಸುರಪುರ ತಾಲೂಕು ಕೊಡೇಕಲ್‌ನ 7 ವರ್ಷದ ಬಾಲಕ ಪಿ- 7893, ಯಾದಗಿರಿ ತಾಲೂಕು ಚಂದಾಪುರದ 31 ವರ್ಷದ ಮಹಿಳೆ ಪಿ-7889, ವಡಗೇರಾದ 24 ವರ್ಷದ ಪುರುಷ ಪಿ-7890, ಸುರಪುರ ಬೈಚಿಬಾಳದ 30 ವರ್ಷದ ಪುರುಷ ಪಿ- 7891 ಹಾಗೂ 26 ವರ್ಷದ ಮಹಿಳೆ ಪಿ- 7892 ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.

1026 ವರದಿ ಬಾಕಿ: ನೋವೆಲ್‌ ಕೋವಿಡ್ ವೈರಸ್‌ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳಲ್ಲಿ ಈವರೆಗೆ 20302 ಜನರ ವರದಿ ನೆಗೆಟಿವ್‌ ಬಂದಿವೆ. ಹೊಸದಾಗಿ ಕಳುಹಿಸಲಾದ 289 ಮಾದರಿಗಳು ಸೇರಿದಂತೆ 1026 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಗುರುವಾರ ಕೋವಿಡ್‌19 ಖಚಿತಪಟ್ಟ 5 ಸೋಂಕಿತರು ಗುಣಮುಖರಾಗಿದ್ದು, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1356 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2753 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

ಜಿಲ್ಲೆಯಲ್ಲಿ 52 ಕಂಟೇನ್ಮೆಂಟ್‌ ಝೋನ್‌ ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 175 ಜನ, ಶಹಾಪುರ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 54, ಸುರಪುರ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 44 ಮತ್ತು ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 68 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 883 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 873 ಪ್ರಕರಣಗಳ ಪೈಕಿ 483 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next