Advertisement
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇಕಾದ ಸಿದ್ಧತೆ ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದರಿಂದ ಹಾಗೂ ಈವರೆಗೂ ಮಳೆ ಕೂಡ ಬೀಳುತ್ತಲೇ ಇರುವುದರಿಂದ ಈಗಾಗಲೇ ನಿಗದಿಪಡಿಸಿರುವ ನ.11, 12 ಹಾಗೂ 13ರಂದು ಸಮ್ಮೇಳನ ಮಾಡಲು ಸಾಧ್ಯವೇ ಇಲ್ಲ. ಈ ಬಾರಿ ಮತ್ತೆ ಸಮ್ಮೇಳನ ದಿನಾಂಕ ಮುಂದೂಡುವುದು ಅನಿವಾರ್ಯವಾಗಿದೆ. ಸಮ್ಮೇಳನದ ದಿನಾಂಕವನ್ನು ಹೀಗೆಯೇ ಮುಂದೂಡಲು ಬಿಡದೆ ಶತಾಯಗತಾಯ ಪ್ರಸಕ್ತ ವರ್ಷದಲ್ಲಿಯೇ ಸಮ್ಮೇಳನ ನಡೆಸುವಂತಾಗಬೇಕು. ಡಿಸೆಂಬರ್ ಅಂತ್ಯದಲ್ಲಾದರೂ ಎಲ್ಲ ಸಿದ್ಧತೆ ಮಾಡಿಕೊಂಡು, ಯಶಸ್ವಿ ಸಮ್ಮೇಳನ ನಡೆಸುವಂತಾಗಬೇಕು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಬೇಕು ಎಂಬ ಬಗ್ಗೆ ಕಸಾಪ ಕೇಂದ್ರ ಸಮಿತಿ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.
Related Articles
Advertisement
ಈವರೆಗೆ ಆಗಿದ್ದೇನು?: ಸಮ್ಮೇಳನವನ್ನು ಕಳೆದ ವರ್ಷ ಫೆಬ್ರುವರಿಯಲ್ಲಿಯೇ ನಡೆಯಬಹುದು ಎಂಬ ಕಾರಣಕ್ಕಾಗಿ ಆಗಲೇ ಅಗತ್ಯ ಎಲ್ಲ ಯೋಜನೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅದರ ಅನುಷ್ಠಾನಕ್ಕೆ ಚಾಲನೆ ಸಿಕ್ಕಿಲ್ಲ. ಈಗಾಗಲೇ ಸಮ್ಮೇಳನಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ಆಗಿದೆ.
ಇದು 86ನೇ ಸಮ್ಮೇಳನವಾಗಿರುವುದರಿಂದ ಸಮ್ಮೇಳನದಲ್ಲಿ 86 ಪುಸ್ತಕಗಳನ್ನು ಬಿಡುಗಡೆ ಮಾಡಲು ಕಸಾಪ ಈಗಾಗಲೇ ನಿರ್ಧರಿಸಿದೆ. ಆ ಪ್ರಕಾರ ಈಗಾಗಲೇ 50 ಸಾಹಿತ್ಯ ಪುಸ್ತಕಗಳ ಮರು ಮುದ್ರಣ ಹಾಗೂ ಎಲ್ಲ ಜಿಲ್ಲೆಯ ಸಾಹಿತ್ಯ ಕುರಿತ ಪುಸ್ತಕ ರಚಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇದರಲ್ಲಿ 20 ಪುಸ್ತಕಗಳು ಸಿದ್ಧವಾಗಿವೆ. ಅದೇ ರೀತಿ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳುವ ಸಂಪುಟ ರಚನೆ ಹಾಗೂ ಸ್ಮರಣಸಂಚಿಕೆ ತಯಾರಿ ಕಾರ್ಯವೂ ನಡೆದಿದೆ. ಸಮ್ಮೇಳನದಲ್ಲಿ ಒಂದು ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು ಅಂದಾಜು ವಿವಿಧ 40 ಗೋಷ್ಠಿ ನಡೆಸಲು ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಆಗಿದೆ.
ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಇನ್ನಷ್ಟು ವಿಳಂಬ ಬೇಡ ಎಂದು “ಉದಯವಾಣಿ’ ಅ.4ರ ಸಂಪಾದಕೀಯದ ಮೂಲಕ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕ ಎಂಬಂತೆ ಕಸಾಪ ಸಮಿತಿ ಸಭೆ ನಡೆಯುತ್ತಿದ್ದು, ಇಲ್ಲಿಯ ಚರ್ಚೆ, ನಿರ್ಣಯಗಳು ಭಾರೀ ಕುತೂಹಲ ಕೆರಳಿಸಿವೆ.
ಕುತೂಹಲ ಕೆರಳಿಸಿದ ಸಿಎಂ ನಡೆ
ಕಸಾಪ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಮಹೇಶ್ ಜೋಶಿ ಸಮ್ಮೇಳನ ವಿಳಂಬದ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆ ಸಿಎಂ ಹಾಗೂ ರಾಜ್ಯ ಸರ್ಕಾರಕ್ಕೆ ಮುಜುಗರಕ್ಕೀಡು ಮಾಡಿರುವ ಬಗ್ಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಸಮ್ಮೇಳನ ಸಿಎಂ ತವರು ಜಿಲ್ಲೆಯಲ್ಲೇ ನಡೆಯುವುದರಿಂದ ಜೋಶಿ ಅವರ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಯಾವ ರೀತಿ ಸೀÌಕರಿಸುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಆರೋಪ ಮುಕ್ತಕ್ಕೂ ಪ್ರಯತ್ನ
ಮುಂದಿನ 2023ನೇ ವರ್ಷ ಚುನಾವಣಾ ವರ್ಷವಾಗಿದ್ದು ಆ ವರ್ಷಕ್ಕೆ ಸಮ್ಮೇಳನ ಮುಂದೂಡಿದರೆ ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನದ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ. ಆದ್ದರಿಂದ ಸಾಹಿತ್ಯ ಸಮ್ಮೇಳನವನ್ನು ಪ್ರಸಕ್ತ ವರ್ಷ ಡಿಸೆಂಬರ್ ಒಳಗೇ ನಡೆಸಲು ಪ್ರಯತ್ನ ಪಡಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಹಾವೇರಿ ಸಾಹಿತ್ಯ ಸಮ್ಮೇಳನ ಕುರಿತು ಚರ್ಚಿಸಲು ಅ.7ರಂದು ಬೆಳಗ್ಗೆ 10.30ಕ್ಕೆ ಕಸಾಪ ಕೇಂದ್ರ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಸಮ್ಮೇಳನ ನಡೆಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. z ಎಚ್.ಬಿ. ಲಿಂಗಯ್ಯ, ಜಿಲ್ಲಾಧ್ಯಕ್ಷರು, ಕಸಾಪ, ಹಾವೇರಿ ಎಚ್.ಕೆ. ನಟರಾಜ