Advertisement

8,667 ಕೋಟಿ ಅನುದಾನ ಕಾಮಗಾರಿಗಳ ಅನುಷ್ಠಾನ

01:21 PM Jun 16, 2019 | Suhan S |

ಪಾಂಡವಪುರ: ಲೋಕೋಪಯೋಗಿ ಇಲಾಖೆಯಿಂದ 200 ಕೋಟಿ ವೆಚ್ಚದಲ್ಲಿ ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ರಸ್ತೆಗಳನ್ನು ಅಭಿವೃದ್ಧ್ದಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ 8,667 ಕೋಟಿ ಅನುದಾನದ ವಿವಿಧ ಕಾಮಗಾರಿಗಳನ್ನು ಶೀಘ್ರವೇ ಅನುಷ್ಠಾನಗೊಳಿಸುವ ಸಂಬಂಧ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧ ಕಾಮಗಾರಿಗಳಿಗೆ ಮಂಜೂರಾತಿ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1,500 ಕೋಟಿಗೂ ಹೆಚ್ಚು ವಿಶೇಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಜತೆಗೆ ಸಣ್ಣ ನೀರಾವರಿ ಇಲಾಖೆಯಿಂದ 182 ಕೋಟಿ ರೂ. ವೆಚ್ಚದಲ್ಲಿ ದುದ್ದ ಹೋಬಳಿಯ ಕೆರೆಗಳನ್ನು ತುಂಬಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದರು.

200 ಕೋಟಿ ವೆಚ್ಚದಲ್ಲಿ ಬಳಘಟ್ಟ-ಮೇಲುಕೋಟೆ ಭಾಗದ ಕೆರೆಗಳು ತುಂಬಿಸುವುದು ಹಾಗೂ ರೈತರ ಕೃಷಿ ಜಮೀನಿಗೆ ಏತ ನೀರಾವರಿ ವ್ಯವಸ್ಥೆ ಕಲ್ಪಿಸುವ ಯೋಜನೆ, ಶ್ಯಾದನಹಳ್ಳಿ ಬಳಿಯ ಹಳ್ಳದಲ್ಲಿ ಹೋಗುವ ಬೀಳು ನೀರನ್ನು ಏತ ನೀರಾವರಿ ಮೂಲಕ ಕಣಿವೆಕೊಪ್ಪಲು ಗೇಟ್ ಬಳಿ ಕೆರೆ ನಿರ್ಮಿಸಿ ನೀರು ತುಂಬಿಸುವ ಯೋಜನೆಗೆ 80 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಶೀಘ್ರ ಚಾಲನೆ: ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಅನುದಾನದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ನಾಲೆ ಹಾಗೂ ವಿತರಣಾ ನಾಲೆಗಳ ಅಭಿವೃದ್ಧಿ ಕಾಮಗಾರಿಗಳು, ಹೇಮಾವತಿ ನಾಲಾ ವ್ಯಾಪಿಯಲ್ಲಿ ಸುಮಾರು 50 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಆರ್‌.ಪೇಟೆ, ಮಂಡ್ಯ ತಾಲೂಕು ಹಾಗೂ ಪಾಂಡವಪುರದ ಕೆಲ ಭಾಗದ ಹೇಮಾವತಿ ನಾಲೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಇನ್ನೂ ಹಲವಾರು ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಸಚಿವ ಪುಟ್ಟರಾಜು ಹೇಳಿದರು.

Advertisement

ಯುಜಿಡಿ ಕಾಮಗಾರಿ ಆರಂಭಕ್ಕೆ ಕ್ರಮ: ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ಯುಜಿಡಿ ಆರಂಭಕ್ಕೂ ಈಗಾಗಲೇ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ರೈತರು ಕೋರ್ಟ್‌ನಿಂದ ತಂದಿರುವ ತಡೆಯಾಜ್ಞೆ ವಜಾಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೂ ಹೆಚ್ಚವರಿಯಾಗಿ 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಯುಜಿಡಿ ಸಮಸ್ಯೆಯನ್ನು ಸದ್ಯದಲ್ಲಿಯೇ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು. ಇದೀಗ ತಾನೇ ನೀತಿ ಸಂಹಿತೆ ಮುಗಿದಿದ್ದು ತ್ವರಿತವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪಿಎಸ್‌ಎಸ್‌ಕೆ ಹಾಗೂ ಕೆ.ಆರ್‌. ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗೀಕರಣಗೊಳಿಸಿ ಪುನಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಪುಟ್ಟರಾಜು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ, ಉಪ ವಿಭಾಗಾಧಿಕಾರಿ ವಿ.ಆರ್‌.ಶೈಲಜಾ, ತಹಶೀಲ್ದಾರ್‌ ಪ್ರಮೋದ್‌ ಎಲ್.ಪಾಟೀಲ್, ಇಒ ಆರ್‌.ಪಿ.ಮಹೇಶ್‌, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next