ಭುವನೇಶ್ವರ: ಹೊಸ ಸಂಚಾರಿ ನಿಯಮ ಜಾರಿಗೆ ಬಂದ ಬಳಿಕ ಅದನ್ನು ಉಲ್ಲಂಘಿಸಿದ ಟ್ರಕ್ ಚಾಲಕರೊಬ್ಬರಿಗೆ ವಿಧಿಸಿದ ದಂಡದ ಮೊತ್ತ ಕೇಳಿದರೆ ನಿಮಗೆ ಶಾಕ್ ಆಗದೇ ಇರದು.
ಹೌದು, ಒಡಿಶಾದ ಸಂಭಾಲ್ಪುರ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ ಟ್ರಕ್ ಚಾಲಕನಿಗೆ ಬರೋಬ್ಬರಿ 86,500 ರೂ. ದಂಡ ವಿಧಿಸಲಾಗಿದೆ! ಇದು ದೇಶದಲ್ಲೇ ಈವರೆಗೆ ವಿಧಿಸಲಾದ ಅತೀ ದೊಡ್ಡ ದಂಡದ ಮೊತ್ತ ಎಂದು ಪರಿಗಣಿಸಲ್ಪಟ್ಟಿದೆ.
ಚಾಲಕ ಅಶೋಕ್ ಜಾಧವ್‌ಗೆ ಈ ಪರಿ ದಂಡ ವಿಧಿಸಿದ ಚಲನ್‌ನ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರಕ್ ಚಲಾಯಿಸಲು ಅನಧಿಕೃತ ವ್ಯಕ್ತಿಗೆ ಅವಕಾಶ ಕೊಟ್ಟದ್ದು(5,000 ರೂ), ಲೈಸೆನ್ಸ್ ಇಲ್ಲದೆ ಚಾಲನೆ (5,000 ರೂ.), ಓವರ್‌ಲೋಡಿಂಗ್ (56,000 ರೂ.) ಸಹಿತ ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿ ಒಟ್ಟಾರೆ 86,500 ರೂ. ದಂಡ ವಿಧಿಸಲಾಗಿದೆ. ಕೊನೆಗೂ 5 ಗಂಟೆಗಳ ಕಾಲ ಚೌಕಾಸಿ ಮಾಡಿ ಚಾಲಕ 70 ಸಾವಿರ ರೂ. ದಂಡ ಪಾವತಿಸಿದ್ದಾನೆ.
ಅಪಘಾತ ತಡೆಗೆ ಈ ಕ್ರಮ
ಈ ನಡುವೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಠಿನ ಸಂಚಾರಿ ನಿಯಮಗಳನ್ನು ಸಮರ್ಥಿಸಿಕೊಂಡಿದ್ದು, ರಸ್ತೆ ಅಪಘಾತ ತಡೆಯುವುದೇ ಪ್ರಮುಖ ಉದ್ದೇಶ ಎಂದಿದ್ದಾರೆ.