ಬೆಂಗಳೂರು: ರಾಜ್ಯ ಸರಕಾರದ ಆದಾಯದಲ್ಲಿ ಕೊರತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸಾಲ ಪಡೆಯುವ ಚಿಂತನೆಯನ್ನು ರಾಜ್ಯ ಸರಕಾರ ನಡೆಸಿದೆ.
ರಾಜ್ಯ ಸರಕಾರ ಈಗಾಗಲೇ 5.53 ಲಕ್ಷ ಕೋಟಿ ರೂ. ಸಾಲ ಹೊಂದಿದ್ದು ಸುಮಾರು 34,000 ಕೋಟಿ ರೂ.ಗಳನ್ನು ಈ ಸಾಲಕ್ಕೆ ಬಡ್ಡಿ ರೂಪದಲ್ಲಿ ಕಟ್ಟುತ್ತಿದೆ. 2023ರ ಮಧ್ಯಮ ಅವಧಿಯ ಹಣಕಾಸು ಯೋಜನೆಯ ಪ್ರಕಾರ 2026-27ರ ಸಾಲಿನ ಹೊತ್ತಿಗೆ ರಾಜ್ಯದ ಸಾಲದ ಪ್ರಮಾಣ 7.24 ಲಕ್ಷ ಕೋಟಿ ರೂ ಗೆ ಏರಲಿದೆ.
ಸಿದ್ದರಾಮಯ್ಯ ಅವರು ಮಂಡಿಸಿದ ತಮ್ಮ ಎರಡನೇ ಅವಧಿಯ ಮೊದಲ ಬಜೆಟ್‌ನಲ್ಲಿ 85,818 ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದರು. ಈ ಹಣಕಾಸು ವರ್ಷದಲ್ಲಿ ಸಪ್ಟೆಂಬರ್ ತಿಂಗಳ ತನಕ ರಾಜ್ಯ ಸರಕಾರ 1,191 ಕೋಟಿ ರೂ. ಗಳಷ್ಟು ಮಾತ್ರ ಸಾಲ ಪಡೆದಿದೆ. ಆದರೆ ಅಕ್ಟೋಬರ್ ಹೊತ್ತಿಗೆ ರಾಜ್ಯ ಸರಕಾರವು 7,399.90 ಕೋಟಿ ರೂ ಸಾಲ ಪಡೆದಿದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಆರಂಭದಲ್ಲಿ ಅದಾಯದ ಹರಿವು ಉತ್ತಮವಾಗಿರುವುದರಿಂದ ಹೆಚ್ಚು ಸಾಲ ಪಡೆಯುವ ಅಗತ್ಯ ಬೀಳುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಹಣದ ಹರಿವು ಕಡಿಮೆ ಆಗುವ ಜತೆಗೆ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುವುದರಿಂದ ಸಾಲ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ರಾಜ್ಯ ಸರಕಾರದ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸುತ್ತಾರೆ.
ರಾಜ್ಯದ ಹಣಕಾಸು ನಿರ್ವಹಣ ಪರಿಶೀಲನ ಸಮಿತಿಯು ಸಾಲ ಮಾಡುವುದಕ್ಕೆ ಕಡಿವಾಣ ಹಾಕಿ, ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ವಿವೇಚನಾಯುಕ್ತವಾಗಿ ಖರ್ಚು ಮಾಡುವುದು ಸೂಕ್ತ ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.