ಬಾಗಲಕೋಟೆ: ಕೆಲ ಕಂಪನಿಗಳು ಕಳಪೆ ಸೋಯಾ ಬಿತ್ತನೆ ಬೀಜ ನೀಡಿದ್ದರಿಂದ ಜಿಲ್ಲೆಯ 86 ಹಳ್ಳಿಯ 1856 ಜನ ರೈತರು ಹಾನಿ ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ಕೃಷಿ ಸಚಿವರು ಮತ್ತು ಕಂಪನಿಗಳ ಮುಖ್ಯಸ್ಥರ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಬಳಿಕ ರೈತರಿಗೆ ಯೋಗ್ಯ ಪರಿಹಾರ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1312 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆ ಮಾಡಿದ್ದು, ಅದು ಸರಿಯಾದ ಫಸಲು ಬಾರದೇ ಹಾನಿಯಾಗಿದೆ. ಕೃಷಿ ಇಲಾಖೆಯಿಂದ ಈ ಕುರಿತು ಸಮಗ್ರ ಮಾಹಿತಿ ಪಡೆದು ಕೃಷಿ ಸಚಿವರ ಗಮನಕ್ಕೆ ತರಲಾಗಿದೆ. ರೈತರಿಗೆ ಯೋಗ್ಯ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಅವರು ಸೋಯಾಬಿನ್ ಬೀಜ ವಿತರಿಸಿದ ಕಂಪನಿಗಳ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆಂದು ವಿವರಿಸಿದರು.
ಮುಧೋಳ ಬೈಪಾಸ್ ಕಳಪೆ ಆಗಿಲ್ಲ: ಮುಧೋಳದ ಬೈಪಾಸ್ ರಸ್ತೆ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಅದಕ್ಕಾಗಿಯೇ ತಾಂತ್ರಿಕ ಕಮೀಟಿ ಇದೆ. ವಿಜೆಲೆನ್ಸಿ ಕೂಡ ಇರುತ್ತದೆ. ಯಾವುದೇ ಜ್ಞಾನ ಇಲ್ಲದವರು, ಬ್ಲಾಕ್ ಮೇಲೆ ಮಾಡಲು ಆರೋಪಿಸುವುದು ಸರಿಯಲ್ಲ. ಯಾವ ಹಂತದಲ್ಲಿ ಕಳಪೆಯಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಆಗ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನನಗೆ ಗೊತ್ತಿಲ್ಲ: ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಕಾರ್ಖಾನೆಯನ್ನು 40 ವರ್ಷಗಳ ಲೀಜ್‌ಗೆ ನಿರಾಣಿ ಉದ್ಯಮ ಸಮೂಹ ಪಡೆದಿರುವ ಕುರಿತು ಕೇಳಿದ ಪ್ರಶ್ನೆಗೆ, ನನಗೆ ಉದ್ಯಮದ ಬಗ್ಗೆ ಮಾಹಿತಿ ಇಲ್ಲ. ಟೆಂಡರ್ ಮೂಲಕ ಅವರು ಲೀಜ್ ಪಡೆದಿದ್ದಾರೆ ಎಂದಷ್ಟೇ ಹೇಳಿದರು. ಸದ್ಯ ಇಡೀ ದೇಶದಲ್ಲಿ ಎಲ್ಲ ಹಂತದ ಉದ್ಯಮಗಳು ಸಂಕಷ್ಟದಲ್ಲಿವೆ. ಸಕ್ಕರೆ ಉದ್ಯಮವಂತೂ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಸ್ಥಗಿತಗೊಂಡ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಖಾಸಗಿ ವಲಯಕ್ಕೆ ನೀಡಿದೆ ಎಂದರು.
ನಿಷ್ಠಾವಂತರಿಗೆ ಆದ್ಯತೆ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲೂ ಪಕ್ಷ ನಿಷ್ಠರಿಗೆ ಆದ್ಯತೆ ದೊರೆಯಲಿದೆ. ಜಿಲ್ಲೆಯ ಪಕ್ಷದ ನಿಷ್ಠಾವಂತರಿಗೆ ಅವಕಾಶ ನೀಡಲು ನಾವೂ ಪಕ್ಷದ ಹಿರಿಯರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಚುನಾವಣೆಗೆ ನಮ್ಮ ಪಕ್ಷದ ಬೆಂಬಲಿಗರು, ಎಲ್ಲಾ ಕ್ಷೇತ್ರದ ಸ್ಥಾನಗಳಿಗೂ ಸ್ಪರ್ಧೆ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ| ವೀರಣ್ಣ ಚರಂತಿಮಠ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮುಂತಾದವರು ಇದ್ದರು.
ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಭೂಸ್ವಾಧೀನ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. 2 ತಿಂಗಳಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣಗೊಳ್ಳಲಿದೆ. ಕಾಮಗಾರಿಗಾಗಿ ಅನುದಾನ ಮೀಸಲಿದ್ದು, 2 ತಿಂಗಳ ಬಳಿಕ ರೈಲ್ವೆ ಮಾರ್ಗ
-ನಿರ್ಮಾಣಕ್ಕೆ ಇಲಾಖೆ ಟೆಂಡರ್ ಕರೆಯಲಿದೆ. ಪಿ.ಸಿ.ಗದ್ದಿಗೌಡರ, ಸಂಸದ