Advertisement

ಮಂಗಳೂರು, ಪುತ್ತೂರು ವಿಭಾಗ ; 86 ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ

01:03 AM May 20, 2020 | Hari Prasad |

ಮಂಗಳೂರು/ಪುತ್ತೂರು: ಲಾಕ್‌ಡೌನ್‌ ಆರಂಭವಾಗಿ ಸುಮಾರು ಎರಡು ತಿಂಗಳ ಬಳಿಕ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಮಂಗಳವಾರ ಆರಂಭವಾಗಿದ್ದು, ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಮೊದಲ ದಿನ 86 ಬಸ್‌ಗಳು ಸಂಚರಿಸಿದವು.

Advertisement

ಮಂಗಳೂರು ವಿಭಾಗದಿಂದ 41, ಪುತ್ತೂರು ವಿಭಾಗದಿಂದ 45 ಬಸ್‌ಗಳು ದ.ಕ. ಜಿಲ್ಲೆಯೊಳಗೆ ಮತ್ತು ಅಂತರ್‌ ಜಿಲ್ಲೆಗಳಿಗೆ ತೆರಳಿವೆ. ಆದರೆ ಯಾವುದೇ ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ.

ಮಂಗಳೂರು ಡಿಪೋದಿಂದ ಮೊದಲ ಬಸ್‌ ಬೆಳಗ್ಗೆ 7 ಗಂಟೆ ಸುಮಾರಿಗೆ ಬೆಂಗಳೂರಿಗೆ ತೆರಳಿತು. ಒಟ್ಟು 7 ಬಸ್‌ಗಳು ಬೆಂಗಳೂರಿಗೆ, 3 ಹುಬ್ಬಳ್ಳಿಗೆ, ಮೈಸೂರು, ಶಿವಮೊಗ್ಗ, ಉಪ್ಪಿನಂಗಡಿ ಮತ್ತು ಧರ್ಮಸ್ಥಳಕ್ಕೆ ತಲಾ ಒಂದು ಬಸ್‌ ಸಂಚರಿಸಿತು.

ಉಡುಪಿ, ಕುಂದಾಪುರ ಡಿಪೋಗಳಿಂದಲೂ ಒಟ್ಟು 27 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಒಟ್ಟು 17 ಬಸ್‌ಗಳು ಕಾರ್ಯಾಚರಿಸಿವೆ. ಮಂಗಳೂರಿಗೆ 7, ಕುಂದಾಪುರಕ್ಕೆ 4 ಬಸ್‌ಗಳು, ಮಡಿಕೇರಿಗೆ 6 ಬಸ್‌ಗಳು ಬಂದಿವೆ.


ಪ್ರಯಾಣಿಕರ ಅಪಸ್ವರ

ಬಸ್‌ ಹೊರಟ ಮೇಲೆ ದಾರಿಯಲ್ಲೆಲ್ಲೂ ನಿಲುಗಡೆಗೆ ಇರಲಿಲ್ಲ. ಊಟ, ತಿಂಡಿಗೂ ಅವಕಾಶ ಇರಲಿಲ್ಲ. ಇದು ಪ್ರಯಾಣಿಕರ ಅಪಸ್ವರಕ್ಕೆ ಕಾರಣವಾಯಿತು. ಒಂದು ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸಿದರೆ ನೇರವಾಗಿ ಬೆಂಗಳೂರಿಗೆ ತೆರಳುವವರಿಗೆ ಮಾತ್ರ ಅವಕಾಶ.

Advertisement

ಹಾಸನ, ಸಕಲೇಶಪುರ ಸೇರಿದಂತೆ ಇತರ ಮಾರ್ಗ ಪ್ರಯಾಣಿಕರಿಗೆ ಅವಕಾಶ ಇರಲಿಲ್ಲ. ಉಳಿದ ರೂಟ್‌ಗಳಲ್ಲಿ ಬಸ್‌ ಕಾರ್ಯಾ ಚರಣೆ ನಡೆಸಲು 30 ಮಂದಿ ಇದ್ದರೆ ಮಾತ್ರ ಅವಕಾಶವಿತ್ತು. ಇದರಿಂದಾಗಿ ಕೆಲವು ಪ್ರಯಾಣಿಕರು ಗೊಂದಲದಲ್ಲಿ ಸಿಲುಕಿದರು.

ನರ್ಮ್ ಬಸ್‌ ಸಂಚಾರಕ್ಕೆ ಸೂಚನೆ
ಮಂಗಳೂರು ನಗರದೊಳಗೆ ಅಗತ್ಯವಿರುವಲ್ಲಿ ಹಂತ ಹಂತವಾಗಿ ಕೆಎಸ್ಸಾರ್ಟಿಸಿ ನರ್ಮ್ ಬಸ್‌ಗಳ ಸಂಚಾರವನ್ನು ಆರಂಭಿಸುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.


ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಂಗಳವಾರ ಒಟ್ಟು 41 ಜಿಲ್ಲೆ ಮತ್ತು ಅಂತರ್‌ ಜಿಲ್ಲಾ ಬಸ್‌ಗಳು ಸಂಚರಿಸಿವೆ. ಪ್ರತಿಯೊಬ್ಬ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಚಾಲಕ, ನಿರ್ವಾಹಕರಿಗೆ ಮಾಸ್ಕ್ ನೀಡಲಾಗಿದೆ. ಟಿಕೆಟ್‌ ದರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್‌ ಕಾರ್ಯಾಚರಣೆ ನಡೆಸಲಾಗುವುದು.
– ಅರುಣ್‌, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next